ಕಣ್ಣಿನ ದೃಷ್ಟಿ ಹರಿದಷ್ಟು ದೂರವೂ ಕಾಣುವ ಹಸಿರಿನ ಹುಲ್ಲುಗಾವಲು ಒಂದೆಡೆ. ಮುಂದೆ ಸ್ವಲ್ಪ ದೂರದಲ್ಲೇ ಬೆಟ್ಟಗುಡ್ಡಗಳ ಸಾಲು. ಮೇ ತಿಂಗಳು ಇನ್ನೇನು ಮುಗಿದು ಜೂನ್ ಪ್ರಾರಂಭವಾಗುತ್ತಿದ್ದರೂ ಪೂರ್ತಿಯಾಗಿ ಇಳಿಯದ ಚಳಿ. ಬೆಟ್ಟಗಳ ಮೇಲೆಲ್ಲ ದಟ್ಟವಾದ ಸ್ನೋ ಹೊದಿಕೆ. ವಾತಾವರಣ ಹೀಗೇ ಇದ್ದರೆ ಬಹುಷಃ ಆ ಹಿಮ ಎಂದೂ ಕರಗುವುದೇ ಇಲ್ಲವೋ ಏನೊ. ಆ ಚಳಿ ಹವೆಯಲ್ಲಿ ಅಲ್ಲಲ್ಲಿ ಕಾಣುತ್ತಿದ್ದ ಹೊಗೆ ನೋಡಿದರೆ ಎಲ್ಲೊ ಜನರು ಮೈ ಕಾಯಿಸಿಕೊಳ್ಳಲಿಕ್ಕೆ ಅಗ್ಗಿಷ್ಟಿಕೆಗಳನ್ನೇನಾದರೂ ಹಾಕಿದ್ದಾರೆ ಎಂದೆನಿಸಿದರೂ ಆಶ್ಚರ್ಯವಿಲ್ಲ. ತನ್ನ ಅಂತರಾಳದಲ್ಲಿ ಲೆಕ್ಕವಿಲ್ಲದಷ್ಟು ಕುದಿಕುಲುಮೆಗಳನ್ನ್ನು ಅಡಗಿಸಿಟ್ಟುಕೊಂಡಿರುವ ಭೂಮಿ ಅದರಲ್ಲೊಂದಿಷ್ಟನ್ನು ಸ್ಯಾಂಪಲ್ಲಿಗೆ ಎಂದು ತೋರಿಸುವ ಯೆಲ್ಲೋಸ್ಟೋನ್ ನೋಡಲು ಮೇ-ಜೂನ್ ಬಹುಶಃ ಪ್ರಶಸ್ತವಾದ ಸಮಯ. ಜುಲೈ ೪ರ ರಜೆಯಲ್ಲೊಮ್ಮೆ ಯೆಲ್ಲೋಸ್ಟೊನ್ ನೋಡಿದ್ದ ನನಗೆ ಜುಲೈ ತಿಂಗಳ ಬಿಸಿಲಿನಲ್ಲಿ ಕಂಡದ್ದಕ್ಕಿಂತ ಎಷ್ಟೋ ಪಾಲು ಹೆಚ್ಚಿಗೆ ಹಿಡಿಸಿತು. ಸಮಯಕ್ಕೆ ಸರಿಯಾಗಿ ಆಕಾಶದೆತ್ತರಕ್ಕೆ ಚಿಮ್ಮುವ ಓಲ್ಡ್ ಫೇತ್ಫುಲ್ ನೋಡುವದೇ ಒಂದು ಅನುಭವ. ಅವತ್ತು ಆ ನೈಸರ್ಗಿಕ ಕಾರಂಜಿಯ ಪ್ರತ್ಯಕ್ಷ ಅನುಭವದ ಜೊತೆಗೆ ಹಿಂದೊಮ್ಮೆ ಚಿಕ್ಕವನಿದ್ದಾಗ ಸುಧಾದ ಮುಖಪುಟ ಲೇಖನದಲ್ಲಿ ಹೊತ್ತು ಹೊತ್ತಿಗೆ ಮುಗಿಲೆತ್ತರಕ್ಕೆ ಚಿಮ್ಮುವ ಆ ಚಿಲುಮೆಯ ಸೋಜಿಗದ ಬಗ್ಗೆ ಓದಿದ ನೆನಪೂ ಸೇರಿತ್ತು.
ಮುಂದಿನ ಮೂರು ದಿನಗಳಲ್ಲಿ ಮನಃಪೂರ್ತಿಯಾಗಿ ಯೆಲ್ಲೋಸ್ಟೋನಿನ ಮೂಲೆಗಳನ್ನು ಸುತ್ತಿದೆವು. ವಿಶಾಲವಾದ ಬಯಲಿನಲ್ಲಿ ಯಾರ ಹಂಗೂ ಇಲ್ಲದೇ ಯಥೇಚ್ಛೆಯಿಂದ ಮೇಯುತ್ತಿದ್ದ ಬೈಸನ್ನುಗಳು ರಸ್ತೆಗೆ ಬಂದಾಗ ಆದ ಕಾರುಗಳ ಸಾಲಿನಲ್ಲಿ ತಾಳ್ಮೆಯಿಂದ ಕಾದೆವು. ಅಪ್ಪಿ ತಪ್ಪಿ ಒಂದು ಬೈಸನ್ ಸ್ವಲ್ಪ ಹತ್ತಿರ ಬಂದರೂ, 'ದೇವಾ ಅದರಷ್ಟಕ್ಕೆ ಅದು ಸುಮ್ಮನೆ ದಾಟಿಕೊಂಡು ಹೋಗಲಿ ಎಂದುಕೊಳ್ಳುತ್ತಲೇ ಅದರ ಫೋಟೊ ಕ್ಲಿಕ್ಕಿಸಿದೆವು. ಡ್ರೈವ್ ಮಾಡುತ್ತ ದಾರಿಯಲ್ಲಿ ಎಲ್ಲೆಂದರಲ್ಲಿ ಕಾಣುವ ಬಿಸಿನೀರ ಕುಳಿಗಳ ಬಗ್ಗೆ ಆಶ್ಚರ್ಯಪಟ್ಟೆವು. ಆರ್ಟಿಸ್ಟ್ ಪಾಯಿಂಟಿನಿಂದ ಒಂದು ಸುಂದರ ತೈಲ ಚಿತ್ರದಂತೆ ಕಾಣುವ ಪಿಕ್ಚರ್ ಪರ್ಫೆಕ್ಟ್ ಬೆಟ್ಟಗಳ ಸಾಲು, ಮೇಲಿನಿಂದ ಧುಮುಕುವ ನೀರಿನ ಹಿನ್ನೆಲೆಯಲ್ಲಿ ಮನಸೋ ಇಚ್ಛೆ ಫೋಟೊ ತೆಗೆದೆವು. ಎಲ್ಲೋ ದೂರದಲ್ಲಿ ಕಪ್ಪು ಕರಡಿಯೊಂದಿದೆ ಎಂದು ಗುಂಪು ಗುಂಪಾಗಿ ನಿಂತಿದ್ದ ಜನರ ಜೊತೆ ನಾವೂ ನಿಂತು ಕರಡಿಯೇನಾದರೂ ಕಂಡೀತೇ ಎಂದು ನೋಡಲು ಕಣ್ಣಿಗೆ ದುರ್ಬೀನು ಹಿಡಿದೆವು. ಮಾಮಥ್ ಹಾಟ್ ಸ್ಪ್ರಿಂಗಿನ ಕೊತ ಕೊತ ಕುದಿಯುವ ನೀರಿನ ಚಿಕ್ಕ ದೊಡ್ಡ ಡೊಗರುಗಳನ್ನು ನೋಡಿದೆವು. ಆ ಮೂರು ದಿನಗಳಲ್ಲಿ ಅಡಿಗಡಿಗೆ ಪ್ರಕೃತಿ ಸೌಂದರ್ಯ ಹಾಗೂ ರುದ್ರ ಭೀಕರೆತೆಗಳನ್ನು ಒಟ್ಟೊಟ್ಟಿಗೆ ನೋಡಿ ಆನಂದಿಸುತ್ತಿದ್ದವರಿಗೆ ರಜೆ ಮುಗಿದದ್ದು ಒಂದು ರೀತಿ ಬೇಸರವಾದರೂ ಮರಳಿ ಮನೆಗೆ ಹೋಗಿ ನಮ್ಮದೇ ಹಾಸಿಗೆಯಲ್ಲಿ ಮಲಗುವದನ್ನೂ ಎದುರು ನೋಡುತ್ತಿದ್ದೆವು!!


