Tuesday, June 12, 2007

ಪೀಟರ್ ಡ್ರಕರ್ ಮತ್ತು ಕುರು ಭುಂಕ್ಷ್ವಚ

ಪೀಟರ್ ಡ್ರಕರ್ ೬೦ ವರ್ಷಗಳಲ್ಲಿ ಬರೆದ ಲೇಖನಗಳಲ್ಲಿ ಆಯ್ದ ಕೆಲವನ್ನು "The Essential Drucker" ಎನ್ನುವ ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ. ಕೆಲವು ದಿವಸಗಳ ಹಿಂದೆ "Know your strengths and your values" ಎನ್ನುವ ಒಂದು ಭಾಗ ಓದುತ್ತಿದ್ದೆ. ಅದರಲ್ಲಿ ಪ್ರತಿಯೊಬ್ಬನೂ ಹೇಗೆ ತನ್ನ ಸಾಮರ್ಥ್ಯವನ್ನು ಮತ್ತು ತನಗೆ ಯಾವ ಕೆಲಸ ಸರಿಹೊಂದುತ್ತದೆ ಎನ್ನುವುದನ್ನು ಕಂಡುಕೊಳ್ಳಬಹುದು ಎಂದು ಹೇಳುತ್ತಾನೆ. ಅದನ್ನೇ ಮುಂದುವರೆಸುತ್ತ, ಸಾಮರ್ಥ್ಯದ ಅರಿವಾದ ಮೇಲೆ ಹೇಗೆ ತನ್ನ ಪರಿಣತಿಯನ್ನು ಹೆಚ್ಚಿಸಿಕೊಳ್ಳಬಹುದು ಎನ್ನುವುದನ್ನು ಹೀಗೆ ಹೇಳುತ್ತಾನೆ. "ಪ್ರತಿಯೊಬ್ಬನೂ ತಾನು ಯಾವ ಕೆಲಸ ಮಾಡುವುದರಲ್ಲಿ ನಿಷ್ಣಾತನೋ ಆ ಕೆಲಸದಲ್ಲಿ, ಅದಕ್ಕೆ ಸಂಬಂಧಪಟ್ಟ ವಿಭಾಗಗಳಲ್ಲಿ ತನ್ನ ಪರಿಣಿತಿಯನ್ನು ಹೆಚ್ಚಿಸಿಕೊಳ್ಳಲು ಶ್ರಮಿಸಬೇಕೆ ಹೊರತು ತನಗೆ ಏನೇನೂ ಬಾರದ (ಅಥವ ಅತಿ ಕಡಿಮೆ ಕಾಂಪೀಟೆನ್ಸಿ ಇರುವ) ಕೆಲಸದಲ್ಲಿ ಕನಿಷ್ಠ ಮಟ್ಟದ ಸಾಧನೆ ಮಾಡಲು ಅಲ್ಲ. ನಮಗೆ ಯಾವ ಕೆಲಸದಲ್ಲಿ ಸಾಮರ್ಥ್ಯವಿದಯೋ ಅದರಲ್ಲಿ ಮತ್ತಷ್ಟು ಪರಿಣಿತರಾಗಲು ಎಷ್ಟು ಸಮಯ, ಶ್ರಮ ವ್ಯಯಿಸಬೇಕೋ ಅದಕ್ಕೆ ಎಷ್ಟೋ ಪಟ್ಟು ಹೆಚ್ಚಿನ ಶ್ರಮಪಟ್ಟರೂ ನಮಗೆ ಹೊಂದದ ಕೆಲಸದಲ್ಲಿ ನಾವು ಕೇವಲ ಕನಿಷ್ಟ ಪರಿಣತಿ ಪಡೆಯಬಹುದಷ್ಟೆ."

ಅದರ ನಂತರ ಹೇಳುವದು ನಮ್ಮ ಮೌಲ್ಯಗಳ ಬಗ್ಗೆ. ಪ್ರತಿಯೊಬ್ಬ ವ್ಯಕ್ತಿಯೂ ತಾನು ಮಾಡುವ ಕೆಲಸ ತನ್ನ ಜೀವನ ಮೌಲ್ಯಗಳಿಗೆ ಹೊಂದುತ್ತದೆಯೇ ಇಲ್ಲವೇ ಎನ್ನುವದನ್ನು ಸದಾ ಗಮನಿಸಬೇಕು. ವ್ಯಕ್ತಿಯ ಸಾಮರ್ಥ್ಯ ಮತ್ತು ಅವನ ಕಾರ್ಯಕ್ಷಮತೆಗಳು ಒಂದನ್ನೊಂದು ಹೊಂದಿಕೊಂಡಿರುತ್ತವೆ. ಆದರೆ ಅದೇ ವ್ಯಕ್ತಿಯ ಮೌಲ್ಯ ಮತ್ತು ಕಾರ್ಯಕ್ಷಮತೆಗಳು ಹೊಂದಿಕೊಂಡಿರಬೇಕೆಂತಿಲ್ಲ. ಮೌಲ್ಯಗಳಿಗೂ ಮಾಡುವ ಕೆಲಸಕ್ಕೂ ತಿಕ್ಕಾಟ ಬಂದರೆ ನಾವು ಆ ಕೆಲಸದಲ್ಲಿ ಎಷ್ಟೇ ನಿಷ್ಣಾತರಾಗಿದ್ದರೂ ನಮ್ಮ ಮೌಲ್ಯಗಳಿಗನುಗುಣವಾಗಿರುವ ಬೇರೆ ಕೆಲಸವನ್ನು ನೋಡಬೇಕೆ ಹೊರತು ಇದ್ದ ಕೆಲಸದಲ್ಲಿಯೇ ಇರುವುದರಲ್ಲಿ ಅರ್ಥವಿಲ್ಲ. ಯಾವ ಕೆಲಸದಲ್ಲಿ ಜೀವನದ ಹೆಚ್ಚಿನಂಶವನ್ನು ಕಳೆಯುತ್ತೇವೋ ಅದಕ್ಕೂ ನಮ್ಮ ಮೌಲ್ಯಗಳಿಗೂ ಸಾಮರಸ್ಯವಿರದಿದ್ದರೆ ಜಯ ಮೌಲ್ಯಗಳಿಗೆ ಸಿಗಬೇಕೇ ಹೊರತು ಆ ಕೆಲಸದಲ್ಲಿನ ನಮ್ಮ ಪರಿಣಿತಿಗಲ್ಲ.


ಇಷ್ಟನ್ನು ಓದಿ ಅದನ್ನೇ ಮೆಲಕು ಹಾಕುತ್ತಿದ್ದಾಗ ಮಧ್ವಾಚಾರ್ಯರ ದ್ವಾದಶ ಸ್ತೋತ್ರದ ಮೂರನೇ ಸ್ತೋತ್ರ 'ಕುರು ಭುಂಕ್ಷ್ವಚ ಕರ್ಮ ನಿಜಂ ನಿಯತಂ ಹರಿಪಾದ ವಿನಮೃತಯಾ ಸತತಮ್' ಬಗ್ಗೆ ಬನ್ನಂಜೆ ಅವರ ಉಪನ್ಯಾಸವನ್ನು ಕೇಳುತ್ತಿದ್ದೆ. ಎರಡು ವಿಚಾರಧಾರೆಗಳಲ್ಲಿ ಎಷ್ಟೊಂದು ಸಾಮ್ಯ ವಿದೆಯಲ್ಲ ಅನಿಸಿತು. ಒಬ್ಬ ಪಾಶ್ಚಾತ್ಯ ದೇಶದ ೨೦ನೇ ಶತಮಾನದ ಚಿಂತಕ. ಇನ್ನೊಬ್ಬರು ಪೌರ್ವಾತ್ಯದ ೧೧-೧೨ನೇ ಶತಮಾನದ ಧರ್ಮಗುರು. ಮಧ್ವಾಚಾರ್ಯರ ಈ ಸಂದೇಶ ಹೇಳುವುದು ಈಶಾವಾಸ್ಯ ಉಪನಿಷತ್ತಿನ ಸಂದೇಶ. "ಮಾಡು, ಮಾಡಿದ್ದರ ಫಲವನ್ನು ಅನುಭವಿಸು. ಮಾಡುವಾಗ ನಿನಗೆ ನಿಜವಾಗಿ, ಸಹಜವಾಗಿ ಒಲಿದ ಕರ್ಮವನ್ನು ಮಾಡು. ಅದೇ ಸಮಯದಲ್ಲಿ ಸಹಜ ಎಂದು ಏನೇನೋ ಮಾಡುವುದಲ್ಲ, ನಿಯತವಾದದ್ದನ್ನ ಮಾಡು. ನಿಜವಾದದ್ದನ್ನ, ನಿಯತವಾದದ್ದನ್ನ ಮಾಡುವಾಗ ಹರಿಪಾದದಲ್ಲಿ ವಿನಮೃತೆಯಿಂದ ಮಾಡು". ಅದೇ ಶ್ಲೋಕದಲ್ಲಿ ಮುಂದುವರೆದು ಹೇಳುತ್ತಾರೆ,
" ತದಲಂ ಬಹುಲೋಕ ವಿಚಿಂತನಯಾ ಪ್ರವಣಂ ಕುರು ಮಾನಸಮೀಶ ಪದೆ " (ಲೋಕದ ಸುದ್ದಿ ಎಂದು ನಿನಗೆ ಸಂಬಂಧಪಡದಿದ್ದನ್ನೆಲ್ಲ ವಿಚಾರ ಮಾಡ್ತಾ ಸಮಯ ಹಾಳು ಮಾಡಬೇಡ. ಈಶ ಪದದಲ್ಲಿ ಮನಸ್ಸನ್ನಿಟ್ಟು ನಿನ್ನ ಕೆಲಸವನ್ನು ಮಾಡು).