Sunday, June 10, 2007

ಎಂದು ಬರುವುದು ನನ್ನ ಸೇವೆಯ ಪಾಳಿ

ಬಹಳ ಹಿಂದೆ ನನ್ನ ಮೊದಲ ಬ್ಲಾಗ್ ಎಂಟ್ರಿ ಎಂದು ಬರೆದದ್ದು. ಈಗ ಹಾಕುತ್ತಿದ್ದೇನೆ.
ಹಲವು ದಿನಗಳಿಂದ ಇದ್ದ ಬ್ಲಾಗಿಸುವ ಆಸೆಗೆ ಇವತ್ತು ಶ್ರೀಕಾರ ಹಾಕುತ್ತಿದ್ದೇನೆ. ಕಳೆದ ಒಂದು ವಾರದಲ್ಲಿ ವಿದ್ಯಾಭೂಷಣರ ಸಂಗೀತರಸವನ್ನು ಎರಡು ಬಾರಿ ಸವಿಯುವ ಸುಯೋಗ ದೊರಕಿತ್ತು. ಅದರಿಂದ ಆಯ್ದ ಕೆಲ ಘಳಿಗೆಗಳೆ ನನ್ನ ಮೊದಲ ಪುಟ.

ನಮ್ಮಮ್ಮ ಶಾರದೆ, ರೋಗಹರನೆ ಕೃಪಾಸಾಗರ, ಪಿಳ್ಳಂಗೋವಿಯ ಚೆಲ್ವ ಕೃಷ್ಣನೆ ಮುಂತಾದ ದಾಸರ ಪದಗಳನ್ನು ಭಾವಪೂರ್ಣರಾಗಿ ಹಾಡಿದ್ದ ವಿದ್ಯಾಭೂಷಣರ ಹಾಡುಗಾರಿಕೆ ಸೊಗಸಾದದ್ದು. ಅವರ ಈ ಬಾರಿಯ ಅಮೇರಿಕ ಪ್ರವಾಸ ಸಮಯದಲ್ಲಿ ಸ್ಯಾನೆ ಹೋಸೆಗೆ ಬಂದಿದ್ದರು. ನವೆಂಬರ್ ನಾಲ್ಕರಂದು ಒಂದು ಕಾರ್ಯಕ್ರಮ ನಂತರ ದಿನಕ್ಕೊಂದರಂತೆ ಸಹೃದಯರ ಮನೆಗಳಲ್ಲಿ ಸಂಗೀತ ರಸಗವಳ ಮುಂದಿನ ನಾಲ್ಕು ದಿನಗಳ ಕಾಲ ನಡೆಯಿತು. ಕಾರ್ಯಕ್ರಮಗಳ ವರದಿ ನನ್ನ ಈ ಪುಟದ ಉದ್ದೇಶವಲ್ಲ. ಬದಲಿಗೆ ನಾನಲ್ಲಿ ಮೊದಲ ಬಾರಿಗೆ ಕೇಳಿದ ಕೆಲವು ಪದಗಳ ಸ್ವಾರಸ್ಯವನ್ನು ಉಲ್ಲೇಖಿಸುವುದು ಉದ್ದೇಶ.

೧. ಮೊದಲನೇಯದ್ದು, ನವೆಂಬರ್ ನಾಲ್ಕರ ಸಭೆಯಲ್ಲಿ ಹಾಡುತ್ತ ಮೊದಲಿಗೆ "ಸುಲಭದ ಮುಕುತಿಗೆ ಸುಲಭನಾದ ಹರಿ" ಎಂಬ ಪದವನ್ನು ಹಾಡಿ ನಂತರ "ಸುಮ್ಮನೆ ದೊರಕೋದೆ ಮುಕ್ತಿ" ಎಂಬ ಗೋಪಾಲದಾಸರ ಪದ ಎತ್ತಿಕೊಂಡಾಗ ಆ ಕ್ಷಣದಲ್ಲಿ ನನ್ನ ಮುಖದಲ್ಲೊಂದು ಕಿರುನಗೆ ಹಾದು ಹೋಯಿತು. ಸುಲಭವಾಗಿ ಮುಕ್ತಿ ಸಿಗಲು ಅತಿ ಸುಲಭನಾದ ಹರಿ ಕಿರ್ತನೆ ಮಾಡಿ ಎಂಬುವುದು ಮೊದಲ ಸಂದೇಶವಾದರೆ, ಎರಡನೆಯದು ಆ ಹರಿ ಕಾರುಣ್ಯಕ್ಕೆ ಇನ್ನೇನೇನಿರಬೇಕು ಎಂದು ನಿರೂಪಿಸುವ ಪದ! ಕಾರ್ಯಕ್ರಮ ಮುಗಿದ ನಂತರ ಶ್ರೀವಿದ್ಯಾಭೂಷಣರನ್ನು ಇದರ ಬಗ್ಗೆ ಕೇಳಿದಾಗ ಅವರು ಹೇಳಿದ್ದು, "ಹೌದು. ಮತ್ತೆ ಎರಡನ್ನೂ ಸರಿತೂಗಿಸಬೇಕಲ್ಲ!".

೨. ಬನ್ನಂಜೆಯವರು ಬರೆದ ಹಾಡು, ಓ ಪಾಜಕದ ಗಿಣಿಯೇ. ಈ ಹಾಡನ್ನು ನಾನು ಮುಂಚೆ ಕೇಳಿರಲಿಲ್ಲ. ಮೊದಲ ಸಲ ಕೇಳಿದಾಗಲೇ ಮನ ಸೂರೆಗೊಂಡಿತು

ಓ ಪಾಜಕದ ಗಿಣಿಯೆ
ಸೋಜಿಗದ ಗಣಿಯೇ

....
ನೀನೇರಿದೆತ್ತರವ ಕಂಡವರು ಯಾರು?
ನಮಗೂ ತೋರಿಸಯ್ಯ ಆ ಬೆಳಕಿನೂರು
....
ಕೈಮುಗಿಯುವೆನು ಕ್ಷಮೆಯನ್ನು ಕೇಳಿ
ಬೀಜಾಕ್ಷರವನ್ನು ಬರೆಯಯ್ಯ ಎದೆಯನ್ನು ಸೀಳಿ
ಎಂದು ಬರುವುದು ನನ್ನ ಸೇವೆಯ ಪಾಳಿ
ತಲೆಯ ಮೇಲಿರಿಸು ನಿನ್ನ ಪದಧೂಳಿ

ಅಮೋಘ ನುಡಿಗಳು. ಭಕ್ತಿಯ ಮೊರೆ ಹೃದಯ ಕರಗುವಂತೆ ಮೂಡಿ ಬಂದಿದೆ. ನೀನೇರಿದೆತ್ತರವ ಕಂಡವರು ಯಾರು ಎಂಬಲ್ಲಿ ಆನಂದತೀರ್ಥರ ಅಪಾರ ಸಾಧನೆಯನ್ನು ಹೇಳಿದರೆ, ನಮಗೂ ತೋರಯ್ಯ ಆ ಬೆಳಕಿನೂರು ಎಂಬಲ್ಲಿ, ಗುರುವಿನಲ್ಲಿ ಶಿಷ್ಯನ ವಿನಮ್ರ ಪ್ರಾರ್ಥನೆಯಿದೆ. ಎದೆ ಸೀಳಿ ಬೀಜಾಕ್ಷರವನ್ನು ಬರೆ ಎಂಬ ಕಳಕಳಿಯ ಪ್ರಾರ್ಥನೆ ಮತ್ತು ಅದರ ಜೊತೆಯಲ್ಲೇ ಬರುವ ಎಂದು ಬರುವುದು ನನ್ನ ಸೇವೆಯ ಪಾಳಿ ಎಂಬಲ್ಲಿ ನಿರಂತರ ಹರಿಪಾದಸೇವೆಯೆಡೆ ನನ್ನ ಮನ ಹರಿಯುವದೆಂದು, ಅದರಲ್ಲೇ ನಿರತನಾಗುವುದೆಂದು ಎಂಬ ಭಕ್ತಿಪೂರಿತ ಧ್ವನಿ ಸೆರೆಹಿಡಿಯುತ್ತದೆ. ನನ್ನ ತಲೆಯ ಮೇಲಿರಿಸು ನಿನ್ನ ಪದಧೂಳಿ ಎಂದು ಮತ್ತೆ ಪ್ರಾರ್ಥಿಸುವುದು ಆ "ಅತಿಗುಣಗುರುತಮ ಶ್ರೀಮದಾನಂದ ತೀರ್ಥ" ರ ಪಾದಧೂಳಿ. ಅದೆಂಥ ಧೂಳಿಯೆಂದು ತಿಳಿಯಬೇಕಾದರೆ ತ್ರಿವಿಕ್ರಮ ಪಂಡಿತಾಚಾರ್ಯರನ್ನೇ ಕೇಳಬೇಕು ("ತ್ರೈಲೋಕ್ಯಾಚಾರ್ಯ ಪಾದೋಜ್ವಲ ಜಲ ಜಲಿತಾ ಪಾಂಸುರಸ್ಮಾನ್ ಪುನಂತು").

ಪಾಜಕದ ಗಿಣಿಯೇ - ಶುಭನುಡಿಯೇ ಶಕುನ ಹಕ್ಕಿ ಎಂಬಂತೆ ಈ ಆನಂದತೀರ್ಥರೆಂಬ ಗಿಣಿ ನುಡಿಯುವದು ಹರಿನಾಮವೊಂದೇ ಅಲ್ಲವೇ?
ಸೋಜಿಗದ ಗಣಿಯೆ - ಮತ್ತೆ ಮತ್ತೆ ಓದಿದಂತೆ, ಸಂಪರ್ಕ ಬಂದಂತೆ ಆನಂದತೀರ್ಥರ ತತ್ವ ನಮಗೂ ಆನಂದದಾಯಿಯಷ್ಟೇ ಅಲ್ಲದೇ, ಹಲವು ಸೋಜಿಗಗಳ ಗಣಿಯೇ ಆಗಿದೆ.

೩. ಒಂದು ಉಗಾಭೋಗ

ಹ್ಯಾಂಗೆ ಬರೆದಿತ್ತು ಪ್ರಾಚೀನದಲ್ಲಿ
ಹಾಂಗೆ ಇರಬೇಕು ಸಂಸಾರದಲ್ಲಿ

ಪಕ್ಷಿ ಹಾರಿ ಬಂದು ಅಂಗಳದಿ ಕುಳಿತಂತೆ
ಮತ್ತೆ ಆ ಕ್ಷಣದಿ ಹಾರಿ ಹೋದಂತೆ

...

ದಾರಿಗಾರನು ವಸತಿ ಕಂಡಂತೆ
ಹೊತ್ತಾರೆದ್ದು ಹೊರಟು ಹೋದಂತೆ

....

ಈ ಸಂಸಾರದಲ್ಲಿ ಹೇಗೆ ಇರಬೇಕು ಎಂಬ ಈ ಉಗಾಭೋಗ ಓದಿದಂತೆಲ್ಲ ಹೊಸ ಅರ್ಥ ಹೊಮ್ಮಿಸುತ್ತದೆ. ಕೇಳಿದೊಡನೆ ಅತಿ ಸುಲಭವೆಂದೆನಿಸಿದರೂ ಹಿಂದೆಯೇ ಹತ್ತು ಹಲವು ಪ್ರಶ್ನೇಗಳೆಳುತ್ತವೆ.
ಇಲ್ಲಿ ಹೇಳುತ್ತಿರುವುದಾದರೂ ಏನನ್ನು? ಪಕ್ಷಿಯೊಂದು ಹೀಗೆ ಹಾರಿ ಬಂದು ಅಂಗಳಕ್ಕಿಳಿದು ಹಾಗೇ ಕೆಲ ಕ್ಷಣಗಳಲ್ಲಿ ಮತ್ತೆ ಹಾರಿ ಹೋದಂತೆ ಈ ಸಂಸಾರದಲ್ಲಿ ಇರಬೇಕೆ? ಅಂದರೆ ಬೇರೇನನ್ನೂ ಮಾಡುವ ಅವಶ್ಯಕತೆಯಿಲ್ಲವೆ? ಹಾಗಾದರೆ ಮನುಷ್ಯನ ಬದುಕೂ ಪಕ್ಶಿಯ ಆ ಒಂದು ಏನೇನೂ ಮಹತ್ತರವಲ್ಲದ ಹಾರಾಟದಂತೆಯೇ? ಅಲ್ಲ ಎನ್ನುತ್ತದೆ ಹಾಡು. ಈ ಸಂಸಾರಕ್ಕೆ ಬಂದು ಹೋಗುವಾಗಿನ ಮನಃಸ್ಥಿತಿ ಮಾತ್ರ ಹಕ್ಕಿ ಬಂದು ಕುಳಿತು ಹಾರಿಹೋದಂತೆ. ಆ ಹಕ್ಕಿಯೇನು ಸುಮ್ಮನೇ ಬಂದಿತ್ತೆ? ಎಲ್ಲೋ ಆಹಾರ ಕಂಡಿದೆ ಅದಕ್ಕೆ, ಕುಳಿತು ಅಲ್ಲಲ್ಲಿ ಸಿಕ್ಕ ಆಹಾರವ ಹೆಕ್ಕಿ ಕೆಲಸವಾದೊಡನೆ ಬಂದಿದ್ದ ಕುರುಹೂ ಇಲ್ಲದಂತೆ ಹಾರಿ ಹೋಗುವಂತೆ ನಮ್ಮ ಸಂಸಾರದ ಬರುಹೊಗುವುದಿರಬೇಕು ಎಂದೇ ಇರಬೇಕು ಇದರ ಅಂತರ್ಯ. ದಾರಿಗಾರನು ವಸತಿ ಕಂಡಂತೆ, ಹೊತ್ತಾರೆದ್ದು ಹೊರಟು ಹೋದಂತೆ ಎಂಬಲ್ಲಿಯೂ ಅದೇ ಧ್ವನಿ. ಹರಿಯಿತ್ತ ಸಾಧನ ಶರೀರದ ಹುಟ್ಟು ಸಾವುಗಳಿಗೆ ಹೆದರುವ ಅವಶ್ಯಕತೆಯಿಲ್ಲ ಅಲ್ಲವೆ?