Showing posts with label ಕವನ. Show all posts
Showing posts with label ಕವನ. Show all posts

Sunday, January 20, 2008

ಅಶ್ವತ್ಥ



ಎಲ್ಲಿ ನೋಡಿದರಲ್ಲಿ ಜನಜಂಗುಳಿ
ಕಾರು ಇತ್ಯಾದಿಗಳ ಸಾಲು
ಗುಂಪಿನಲ್ಲಿ ನಾನೂ
ಹೊರಟಿರುವುದೆಲ್ಲಿಗೆ?
ತಲುಪುವದೆಲ್ಲಿಗೆ?

ಮತ್ತೊಂದು ಮುಂಜಾವು
ಮತ್ತದೇ ಧಾವಂತ
ಕಾಣದ ನಾಳೆಗಳ ತುಡಿತ
ಇಮ್ಮೀಡಿಯೆಟ್ಟುಗಳ ಕುಣಿತ
ಅಹಸ್ಸಂವತ್ಸರನ ಆಟ

ನೆಟ್ಟ ಕನಸುಗಳ ಚಿಂತೆ
ಕೂಡಿಟ್ಟ ಗಂಟುಗಳ ನಂಟು
ಕಷ್ಟವೆಂದು ನಾಳೆಗಳಿಗಿಟ್ಟ ದಾರಿ
ಕೈ ಬಿಟ್ಟ ಆಶೆಗಳ ಕಥೆ, ವ್ಯಥೆ
ದೂರದಲ್ಲೆಲ್ಲೋ ಸದ್ದು, ಅಸ್ಪಷ್ಟ
ಏನದು? ಕಾಲನ ತಮಟೆ?

ಹೂತಿಟ್ಟ ಪದರುಗಳ ಸೀಳಿ
ತತ್ಕ್ಷಣ ಆಲವಾಗಿ, ಅರಳೆಯಾಗಿ
ಕಣಕಣವ ತುಂಬಿ
ಬದುಕೆಲ್ಲ ಬೆದಕಿ
ಅಸ್ತಿತ್ವವನೆ ಕೆಣಕುವ ಪ್ರಶ್ನೆ;
ಧುತ್ತನೆ ಎದುರಾಯ್ತೆ ಇಂದು

ಗೊತ್ತಿದ್ದು ಮರೆತ ಯಕ್ಷಪ್ರಶ್ನೆ
ಮತ್ತೆ ಮತ್ತೆ ನೆನಪಾಗಿ ಕಾಡಿ,
ಇಂದು ನಾಳೆಗಳ ಸಾರ್ಥಕತೆ
ದ್ವಂದ್ವಗಳಲ್ಲಿ ಮುಳುಗಿ
ಬರಿ ಪ್ರಶ್ನೆಗಳೆ ಉಳಿದಾಗ
ಕರುಣಿಸೋ ಕೃಷ್ಣ ಗೀತಾಮೃತ
ಕಿತ್ತಿಬಿಡಬೇಕು ಈ ಅಶ್ವತ್ಥ


(ಭಗವದ್ಗೀತೆ: ಅಧ್ಯಾಯ ೧೫ರ ಒಂದು ಶ್ಲೋಕ:
’ಅಶ್ವತ್ಥಮೇನಂ ಸುವಿರೂಢಮೂಲಂ
ಅಸಂಗ ಶಸ್ತ್ರೇಣ ಧೃಢೇನ ಛಿತ್ವಾ’)

(೨೦೦೭ರ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ವಾರ್ಷಿಕ ಸಂಚಿಕೆ, ಸ್ವರ್ಣಸೇತುವಿನಲ್ಲಿ ಪ್ರಕಟವಾದದ್ದು)

Tuesday, September 25, 2007

ಮೂರ್ತಿ

ನಿತ್ಯ ನೂತನವಿದು ಅಶ್ವತ್ಥ
ನಿತ್ಯ ಜನನ ಮರಣ ರಂಗ
ಬಿತ್ತಿ ಬೆಳೆದು ಸೆಳೆವ ಮಧ್ಯೆ
ವ್ಯಕ್ತ ಮೂರ್ತಿ ಸಾಧನೆಗೆ ರಂಗ

ಕಷ್ಟ ಸುಖ ಇಷ್ಟ ಅನಿಷ್ಟ
ಕಾಣದ ಕೈ ಉಳಿಯ ಏಟು
ನಿತ್ಯ ನಿತ್ಯ ಹೊಸತು ಪಾಠ
ಕಲಿತ ಹೊರತು ನಿಲ್ಲದಾಟ

ಹತ್ತು ಹಲವು ಮೆಟ್ಟಿಲುಗಳ
ಹತ್ತಿ ಇಳಿದುದ ಮತ್ತೆ ಹತ್ತಿ
ಹುಟ್ಟಿಸಿದಾತನ ಭಕ್ತಿಯಲ್ಲಿ
ಕಟ್ಟಿ, ಸಾವ ಗೆಲ್ಲುವ ತನಕ

ಹೊಡೆಯೊ ನಿನ್ನ ಚಾಣ ಬಿಡದೆ;
ಕಡೆಗೆ ಎದೆಯ ಗೂಡ ಮಧ್ಯೆ
ಬಿಡದೆ ತೋರ್ವ ಬಿಂಬ ಮೂರ್ತಿ
ಕಡೆಯೊ ಎನ್ನ ಬಾಳ ಪೂರ್ತಿ

Friday, August 03, 2007

ಟ್ರಾಫಿಕ್

ಮೈಲುದ್ದ ನಿಂತ ಕಾರುಗಳ ಮಧ್ಯೆ
ನಿಂತು ನಿಂತು ಇಂಚಿಂಚೆ ಮುಂದೆ ಸರಿವ
ಟ್ರಾಫಿಕ್ಕಿನಲ್ಲಿ ಸಿಲುಕಿದ್ದಾಗ ನೆನಪಾದದ್ದು
'ತದೇಜತಿ ತನ್ನೇಜತಿ'

ಖಾಲಿ ರಸ್ತೆಯಲ್ಲಿ ೬೫ರ ವೇಗದಲ್ಲಿ
ಹತ್ತೇನಿಮಿಷಗಳಲ್ಲಿ ತಲುಪುವ ಮನೆ
ಬಲು ದೂರ ಎನಿಸಿದಾಗ ನೆನಪಾದದ್ದು
'ತದ್ದೂರೇ ತದ್ವಂತಿಕೆ'

ಎರಡು ಒಂದು ಎರಡು; ಅಪರೂಪಕ್ಕೊಮ್ಮೊಮ್ಮೆ
ಮೂರು ಎಂದು ಸತತ ಬದಲಿಸುತ್ತ ಗೇರು
ಕೊನೆಗೊಮ್ಮೆ ಎಕ್ಸಿಟ್ಟಿಗಿಳಿದಾಗ ಅನಿಸಿದ್ದು
'ಕೃತೋ ಸ್ಮರ ಕೃತಂ ಸ್ಮರ'

Sunday, July 22, 2007

ಹುತ್ತಗಟ್ಟದ ಚಿತ್ತ

ಹೆಕ್ಕಿ ಹೆಕ್ಕಿ ಅಕ್ಕರ
ಸಾಲು ಸಾಲು ಬರೆದು
ತಿದ್ದಿ ತೀಡಿ ಶಬ್ದಗಳ
ಜೋಡಿಸಿದೊಡನೆ ಕವಿತೆಯಾಯಿತೆ?

ಒಳಗಣ ಹಸಿಬಿಸಿ ಭಾವ
ಅರೆಬೆಂದು ಅವಸರದಲಿ
ಎದೆಯ ಎಲ್ಲೆ ದಾಟಿ
ಹೊರಟ ನಿಟ್ಟುಸಿರಿನಿಂದೆಂಥ ಕವನ?

ಹೆಪ್ಪುಗಟ್ಟಿದ ಹಾಲು ಕೆನೆಮೊಸರು
ಮುಚ್ಚಟೆಯಿಂದ ಕಡೆದರೇ ತಾನೆ
ಬೆಣ್ಣೆ ತೇಲಿ ಬರುವದು ಮಜ್ಜಿಗೆಯಲಿ
ಹೆಪ್ಪುಗಟ್ಟದ ಹಾಲು ಕೊಟ್ಟೀತೆ ನವನೀತ?

ಕನಸುಗಳ ಬಿತ್ತಿ
ಪರಿಶ್ರಮದ ಪಾತಿ ಕಟ್ಟಿ
ವಿಧಿಕರಾರಿನ ಎಲ್ಲೆ ಪರಖಿ
ಬೆಳೆದ ಸಿಹಿಕಹಿಯ ಮೆದ್ದು
ಹುತ್ತಗಟ್ಟದ ಚಿತ್ತ ಕಟ್ಟೀತಾದರು ಏನ ?

Thursday, July 12, 2007

ಬೆಳಕಿನ ವಕ್ರೀಭವನ

ಇರುಳ ಒರೆದು ಉರ್ವಿ ಬೆಳಗಿ
ಸಡಗರದಿ ತೇರನೇರಿ
ಹೊಸತೊಂದು ದಿನದ ಮುದವ
ತಂದ ಬೆಳಕು ಬಾಗುವುದಂತೆ

ಲಕ್ಷ ಲಕ್ಷ ದೂರ ಕ್ಷಣದಲ್ಲೇ ಕ್ರಮಿಸಿ
ಲಕಲಕನೇ ಹೊಳೆಯುತ್ತ ಬರುವ ಬೆಳಕು
ಭುವಿಯ ಪವನ ಸೋಂಕೆ
ಲವಮಾತ್ರ ಬಾಗಿ ಇಳಿವುದಂತೆ

ಅವರವರ ಭಕ್ತಿಭಾವಕ್ಕೆ ತಕ್ಕಂತೆ
ಜಗಜ್ಯೋತಿ ಒಲಿದು ತಾನಾಗೇ ಮಣಿವಂತೆ
ನನ್ನಿಂದಲೇ ಎಲ್ಲ ನಾನೇ ಪರನೆಂಬ
ಜೀವಜ್ಯೋತಿ ಮಹತಿಗೆ ಸೋತು ಒರಗುವಂತೆ

ಗಾಳಿಯಿಂದ ನೀರಿಗಿಳಿವಾಗ ಬಳುಕಿ
ಇಳಿವ ಜಲದ ಮೇಲ್ಮೈಗೆ
ಎಳೆದ ಲಂಬದೆಡೆಗೆ
ವಾಲಿತಂತೆ ಇಳಿದ ಕೋನವಿದ್ದಂತೆ

ಅಷ್ಟೇ ಅಲ್ಲ ನೀರ ಹೊರಮೈಗೆ
ನಿರ್ದಿಷ್ಟ ನೇರ ಸೆಳೆದು ಬಿಟ್ಟ
ಅಂಬಿನಂತೆ ಇಳಿವ ಬೆಳಕು
ಒಂದಿಷ್ಟೂ ಬಾಗದೆ ಹಾಗೆ ಉಳಿವುದಂತೆ

ಅದಕ್ಕೇ ಏನೊ ಸಿರಿ ಲಕ್ಷ್ಮಿಆದಿ
ದಾಸರೆಲ್ಲ ಇದಿರು ನೋಡುವರು
ಮುದ್ದು ವಿಟ್ಠಲನ ಕಟಾಕ್ಷಕ್ಕೆ!
ಇದ್ದೇನೆಂಬುದ ಲೆಕ್ಕಿಸದಂತೆ
ಮದ್ದಾನೆ ಜಲಧಿ ನುಗ್ಗುವಂಥ
ನೋಟಕ್ಕಿಂತ, ಸದ್ಭಕ್ತಿ ಮೆಚ್ಚಿ
ಮಣಿದು ಹೊಳೆವ ಸಚ್ಚಿದಾನಂದ
ಬಿಂಬವಾಗಿ ಚಿದ್ದೇಹದೊಳು
ನೆಲೆನಿಂತು ಕಾಪಿಡುವ
ಕುಡಿನೋಟವನ್ನೇ ಎಂದೂ!

Saturday, June 02, 2007

Maroon Bells, Aspen, CO

ಅಚ್ಚ ಬಿಳಿಯ ಸ್ನೋ ಕಂದು ಬೆಟ್ಟವ ಅರೆ ಮುಚ್ಚಿರಲು

ಹಚ್ಚ ಹಸಿರಿನ ಆಚ್ಛಾದನೆ ಕಣ್ಣಿಗ್ಹಬ್ಬವಾಗಿರಲು
ಸ್ವಚ್ಛ ನೀರಿನೀ ಕೊಳವು ಕಾದಿಹುದು
ನನ್ನೊಡಲ ಕನ್ನಡಿಯ ಮಾಡಿ ಈ ಸೊಬಗ
ಇಮ್ಮಡಿಯ ಮಾಳ್ಪೆ ಆ ದಿನಮಣಿಯು
ತನ್ನೊಡಲ ಬಿಸಿಯ ತುಸು ತಗ್ಗಿಪನೆ ಎಂದು




ತಿಳಿಹಳದಿ ಹೊಸಹಸಿರ ವನರಾಶಿ ತ-
ನ್ನೊಳ ತೋರುತ್ತ ಹರಿವ ತಿಳಿನೀರ ಹೊಳೆ
ಸುಳಿಸುಳಿದು ಮೈದಡವಿ ಕಚಗುಳಿಯಿಟ್ಟ ಗಾಳಿ
ಬಿಳಿ ಹಿಮವ ಕೊಡವಿಕೊಳ್ಳುತಿರುವ ಬೆಟ್ಟ
ವ್ಯಷ್ಟಿಯಲಿ ಅಷ್ಟಷ್ಟೆ ಮನ ತುಷ್ಟಿಗೊಳಿಸುವವು, ಕೈ
ಮುಷ್ಟಿಯಂತೆ ಸಮಷ್ಟಿಯಲಿ ಒತ್ತಟ್ಟಿಗಿರುವ
ಸೃಷ್ಟಿ ಸೊಬಗ ಹಿಡಿದಿಡುವಾಸೆ ಚಿತ್ತದೊಳು
ದೃಷ್ಟಿ ಸಾಲದು ಒಳಗಣ್ಣ ತೆರೆಸು ಹೇ ಪರಮೇಷ್ಠಿ