Sunday, January 20, 2008

ಅಶ್ವತ್ಥ



ಎಲ್ಲಿ ನೋಡಿದರಲ್ಲಿ ಜನಜಂಗುಳಿ
ಕಾರು ಇತ್ಯಾದಿಗಳ ಸಾಲು
ಗುಂಪಿನಲ್ಲಿ ನಾನೂ
ಹೊರಟಿರುವುದೆಲ್ಲಿಗೆ?
ತಲುಪುವದೆಲ್ಲಿಗೆ?

ಮತ್ತೊಂದು ಮುಂಜಾವು
ಮತ್ತದೇ ಧಾವಂತ
ಕಾಣದ ನಾಳೆಗಳ ತುಡಿತ
ಇಮ್ಮೀಡಿಯೆಟ್ಟುಗಳ ಕುಣಿತ
ಅಹಸ್ಸಂವತ್ಸರನ ಆಟ

ನೆಟ್ಟ ಕನಸುಗಳ ಚಿಂತೆ
ಕೂಡಿಟ್ಟ ಗಂಟುಗಳ ನಂಟು
ಕಷ್ಟವೆಂದು ನಾಳೆಗಳಿಗಿಟ್ಟ ದಾರಿ
ಕೈ ಬಿಟ್ಟ ಆಶೆಗಳ ಕಥೆ, ವ್ಯಥೆ
ದೂರದಲ್ಲೆಲ್ಲೋ ಸದ್ದು, ಅಸ್ಪಷ್ಟ
ಏನದು? ಕಾಲನ ತಮಟೆ?

ಹೂತಿಟ್ಟ ಪದರುಗಳ ಸೀಳಿ
ತತ್ಕ್ಷಣ ಆಲವಾಗಿ, ಅರಳೆಯಾಗಿ
ಕಣಕಣವ ತುಂಬಿ
ಬದುಕೆಲ್ಲ ಬೆದಕಿ
ಅಸ್ತಿತ್ವವನೆ ಕೆಣಕುವ ಪ್ರಶ್ನೆ;
ಧುತ್ತನೆ ಎದುರಾಯ್ತೆ ಇಂದು

ಗೊತ್ತಿದ್ದು ಮರೆತ ಯಕ್ಷಪ್ರಶ್ನೆ
ಮತ್ತೆ ಮತ್ತೆ ನೆನಪಾಗಿ ಕಾಡಿ,
ಇಂದು ನಾಳೆಗಳ ಸಾರ್ಥಕತೆ
ದ್ವಂದ್ವಗಳಲ್ಲಿ ಮುಳುಗಿ
ಬರಿ ಪ್ರಶ್ನೆಗಳೆ ಉಳಿದಾಗ
ಕರುಣಿಸೋ ಕೃಷ್ಣ ಗೀತಾಮೃತ
ಕಿತ್ತಿಬಿಡಬೇಕು ಈ ಅಶ್ವತ್ಥ


(ಭಗವದ್ಗೀತೆ: ಅಧ್ಯಾಯ ೧೫ರ ಒಂದು ಶ್ಲೋಕ:
’ಅಶ್ವತ್ಥಮೇನಂ ಸುವಿರೂಢಮೂಲಂ
ಅಸಂಗ ಶಸ್ತ್ರೇಣ ಧೃಢೇನ ಛಿತ್ವಾ’)

(೨೦೦೭ರ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ವಾರ್ಷಿಕ ಸಂಚಿಕೆ, ಸ್ವರ್ಣಸೇತುವಿನಲ್ಲಿ ಪ್ರಕಟವಾದದ್ದು)

Sunday, January 13, 2008

ಸ್ಟೈನ್ಬೆಕ್ಕನ 'ದಿ ಪರ್ಲ್', ಒಂದು ಮುತ್ತಿನ ಕಥೆ

ಹೋದವಾರ ಜಾನ್ ಸ್ಟೈನ್ಬೆಕ್ ಬರೆದ ’ದಿ ಪರ್ಲ್’ ಓದಿದೆ. ಸುಮಾರು ೧೧೦ ಪುಟಗಳ ಚಿಕ್ಕ ಪುಸ್ತಕ. ೧೯೪೫ರಲ್ಲಿ ಬರೆದದ್ದು. ಲೈಬ್ರರಿಯ ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಮಾರಾಟದಲ್ಲಿ ೨೫ ಸೆಂಟಿಗೆ ಕೊಂಡ ಪುಸ್ತಕ. ಸರಳ ಕಥೆ, ಅದ್ಭುತ ಎನಿಸುವಂತಹ ನಿರೂಪಣೆ.

ದಿನನಿತ್ಯ ತನ್ನ ಸೊಂಟಕ್ಕೊಂದು ದೊಡ್ಡ ಕಲ್ಲನ್ನು ಕಟ್ಟಿಕೊಂಡು ಸಮುದ್ರದ ತಳಕ್ಕೆ ಇಳಿದು ಅಲ್ಲಿನ ಚಿಪ್ಪುಗಳಲ್ಲಿ ಮುತ್ತು ಹುಡುಕುವ ಕಾಯಕದ ಕೀನೊ ಕಥಾನಾಯಕ. ಯುವಾನ ಅವನ ಹೆಂಡತಿ ಹಾಗೂ ಅವರಿಗೊಬ್ಬ ಮಗ ಕೊಯೊಟಿಟೊ. ಒಂದಾನೊಂದು ದಿನ ಕೊಯೊಟಿಟೊನಿಗೆ ಚೇಳು ಕುಟುಕುತ್ತದೆ. ಕುಟುಕಿದ ಕ್ಷಣವೇ ಯುವಾನ ಚೇಳು ಕುಟುಕಿದ ಸ್ಥಳದಿಂದ ವಿಷವನ್ನು ಹೀರಿ ತೆಗೆಯುವ ಪ್ರಯತ್ನ ಮಾಡುತ್ತಾಳೆ. ಕೊನೆಗೆ ವೈದ್ಯನ ಹತ್ತಿರ ಹೋಗುವದೇ ಒಳ್ಳೆಯದು ಎಂದುಕೊಂಡು ಆ ಊರ ವೈದ್ಯನ ಮನೆಗೆ ಹೋಗುತ್ತಾರೆ. ಇವರ ಹತ್ತಿರ ಕೊಡಲು ಏನೂ ದುಡ್ಡಿಲ್ಲ ಎಂದು ತಿಳಿದುಕೊಂಡ ವೈದ್ಯ ಮನೆಯೊಳಗೇ ಕುಳಿತುಕೊಂಡು ತಾನು ಮನೆಯಲ್ಲಿಲ್ಲ ಎಂದು ಹೇಳಿಸುತ್ತಾನೆ.

ಇಂಥ ಪರಿಸ್ಥಿತಿಯಲ್ಲಿ ಹೇಗಾದರೂ ವೈದ್ಯ ತಮ್ಮ ಮಗನನ್ನು ನೋಡುವಂತಾಗಲಿ, ಆ ವೈದ್ಯನಿಗೆ ಕೊಡಲು ಒಂದು ಮುತ್ತಾದರೂ ಸಿಗಬಹುದೇನೋ ಎಂದುಕೊಂಡು ಅವತ್ತು ಮತ್ತೆ ಸಮುದ್ರಕ್ಕಿಳಿಯುತ್ತಾನೆ. ಅವನ ಅದೃಷ್ಟ, ಎಂದೂ ಕಂಡಿರದಂತಹ ಮುತ್ತೇ ಸಿಗುತ್ತದೆ ಅವತ್ತು. ಕೋಳಿ ಮೊಟ್ಟೆ ಗಾತ್ರದ ಮುತ್ತನ್ನು ನೋಡಿ ಕೀನೊ ಮತ್ತು ಯುವಾನಾಗೆ ಸ್ವರ್ಗವೇ ಸಿಕ್ಕಷ್ಟು ಖುಷಿ. ಈ ದೊಡ್ಡ ಮುತ್ತು ಸಿಕ್ಕ ಕಥೆ ಕ್ಷಣದಲ್ಲಿ ಊರ ತುಂಬೆಲ್ಲ ಹರಡಿ ಆ ಕ್ಷಣದಲ್ಲೆ ಕೀನೋಗೆ ಎಲ್ಲರಿಗೂ ಬೇಕಾದವನಾಗಿಬಿಡುತ್ತಾನೆ. ಹಿತಶತ್ರುಗಳೂ ಹುಟ್ಟಿಕೊಳ್ಳುತ್ತಾರೆ. ಚಿಕ್ಕ ಊರಿನಲ್ಲಿ ಇಂತಹ ವಿಷಯಗಳು ಹೇಗೆ ಹಲವರ ಮನಸ್ಸಿನಲ್ಲಿ ತಮ್ಮ ಸ್ವಾರ್ಥದ ವಿಚಾರಗಳನ್ನು ಪ್ರೇರಿಸುತ್ತವೆ ಎನ್ನುವದು ಬಹಳ ಸಮರ್ಥವಾಗಿ ಚಿತ್ರಿತವಾಗಿದೆ. ಆ ಊರ ಚರ್ಚಿನ ಪಾದ್ರಿಗೆ ಆಗಬೇಕಾದ ಚರ್ಚಿನ ರಿಪೇರಿಗಳ ನೆನಪಾಗುತ್ತದೆ. ಮನೆಯಲ್ಲಿದ್ದೂ ಹೊರಹೋಗಿದ್ದೇನೆ ಎಂದು ಹೇಳಿಸಿದ್ದ ವೈದ್ಯ ಇನ್ನೊಬ್ಬರ ಮುಂದೆ ಕೀನೋನ ಮಗನಿಗೆ ಕುಟುಕಿದ ಚೇಳಿನ ವಿಷಕ್ಕೆ ತಾನು ಮದ್ದು ಮಾಡುತ್ತಿರುವದಾಗಿ ಕೊಚ್ಚಿಕೊಳ್ಳುತ್ತಾನೆ. ಊರ ಬಟ್ಟೆ ಅಂಗಡಿ ಮಾಲೀಕರಿಗೆ ಕೀನೊ ಬಟ್ಟೆ ಕೊಳ್ಳುತ್ತಾನೆ ಎನ್ನುವ ಖುಷಿ. ಚರ್ಚಿನ ಬಾಗಿಲ ಬಳಿ ಕೂಡುವ ಭಿಕ್ಷುಕರಿಗಂತೂ ಒಮ್ಮಿಂದೊಮ್ಮೆಲೆ ಸಾಹುಕಾರನಾದ ಕೀನೊ ಒಳ್ಳೆ ಭಿಕ್ಷೆ ಹಾಕುತ್ತಾನೆ ಎನ್ನುವ ಭಾವನೆಯೇ ಖುಷಿಕೊಡುತ್ತದೆ. ಒಟ್ಟಿನಲ್ಲಿ ಕೀನೊ ಮತ್ತು ಅವನ ಮುತ್ತು ಆ ಮಲಗಿದಂತಹ ಊರಿನಲ್ಲಿ ಒಂದು ಸಂಚಲನವನ್ನೇ ಮಾಡುತ್ತದೆ.

ಬೆಳಿಗ್ಗೆ ಮನೆಯಲ್ಲಿಲ್ಲ ಎಂದಿದ್ದ ವೈದ್ಯ ರಾತ್ರಿ ಖುದ್ದು ಕೀನೊನ ಮನೆಗೆ ಬಂದು ಮಗುವಿಗೆ ಮದ್ದು ಕೊಡುತ್ತೇನೆ ಎನ್ನುತ್ತಾನೆ. ಮಗುವಿನ ವಿಷ ಇಳಿದಂತೆ ಕಂಡರೂ ’ಇಲ್ಲಿ ನೋಡು ಕಚ್ಚಿದ ಜಾಗ ಹೇಗೆ ಹಸಿರಾಗಿದೆ’ ಎಂದು ಸಂಶಯದ ಬೀಜ ಬಿತ್ತಿ ಅದೇನೋ ಬಿಳಿ ಪುಡಿಯನ್ನು ಮಗುವಿಗೆ ಕೊಡುತ್ತಾನೆ. ಇನ್ನೊಂದು ಗಂಟೆಯಲ್ಲಿ ವಿಷ ಹೆಚ್ಚಾಗಬಹುದು ಮತ್ತೆ ಬಂದು ನೋಡುತ್ತೇನೆ ಎನ್ನುತ್ತಾನೆ. ಕೀನೋಗೊ ಅಷ್ಟೊತ್ತಿಗಾಗಲೇ ಹಲವರ ಮೇಲೆ ಸಂಶಯ ಶುರುವಾಗಿರುತ್ತದೆ. ವೈದ್ಯ ಕೊಟ್ಟದ್ದು ನಿಜವಾಗಿಯೂ ಔಷಧಿಯೆ ಅಥವ ವಿಷವೇ ಅನ್ನುವ ಸಂಶಯ. ವೈದ್ಯ ಹೇಳಿದ ಮಾತು ನಿಜವೋ ಅಲ್ಲವೋ ನನಗಂತೂ ಗೊತ್ತಿಲ್ಲ, ಮುತ್ತನ್ನು ಮಾರಿ ಬರುವ ಹಣದಲ್ಲಿ ಕೊಯೊಟಿಟೋನನ್ನು ಓದಿಸುತ್ತೇನೆ ಆಗ ಗೊತ್ತಾಗುತ್ತದೆ ನಿಜವಾಗಿಯೂ ಪುಸ್ತಕಗಳಲ್ಲಿ ಇರುವದು ಏನು ಎನ್ನುವದು ಅಂದುಕೊಳ್ಳುತ್ತಾನೆ. ವೈದ್ಯ ಹೇಳಿದಂತೆ ಒಂದು ಗಂಟೆಯಷ್ಟೊತ್ತಿಗೆ ವಿಷ ಮತ್ತೆ ಏರಿದಂತೆ ಕಂಡಾಗ ಕೀನೋಗೆ ವೈದ್ಯನ ಮೇಲೆ ಅಲ್ಪಸ್ವಲ್ಪ ನಂಬಿಕೆ ಬರುತ್ತದೆ. ಮತ್ತೆ ಬಂದ ವೈದ್ಯ ಮತ್ತೊಂದು ಔಷಧಿ ಕುಡಿಸಿ ವಿಷ ಕಮ್ಮಿಯಾಗುವ ತನಕ ಇದ್ದು ಹೋಗುವ ಮುಂಚೆ ’ನನ್ನ ಹಣ ಯಾವಾಗ ಕೊಡುತ್ತೀಯ’ ಎನ್ನುತ್ತಾನೆ. ಕೀನೋಗೆ ಮುತ್ತು ಸಿಕ್ಕ ವಿಶಯವನ್ನು ಆಗ ತಾನೆ ತಿಳಿದಂತೆ ನಟಿಸಿ ಅತಿ ಸಂಭಾವಿತನಂತೆ ಕೀನೋಗೆ ಏನಾದರು ಮುತ್ತನ್ನು ಇಡಲು ಸುರಕ್ಷಿತ ತಾಣ ಬೇಕಿದ್ದರೆ ತನ್ನ ಲಾಕರಿನಲ್ಲಿ ಇಡುತ್ತೇನೆ ಎನ್ನುತ್ತಾನೆ!!

ಮರುದಿನ ಮುತ್ತನ್ನು ಮಾರಲು ಹೋದ ಕೀನೋಗೆ ಮುತ್ತನ್ನು ಕೊಂಡುಕೊಳ್ಳುವವರು ’ ಈ ಮುತ್ತು ತುಂಬ ದೊಡ್ಡದು, ಯಾವ ಆಭರಣದಲ್ಲು ಬಳಸಲು ಬರುವದಿಲ್ಲ. ಬಹಳವೆಂದರೆ ೧೦೦೦ ಪೆಸೊ ಕೊಡಬಹುದು’ ಎಂದಾಗ ಸಿಡಿದೆದ್ದ ಕೀನೋ, ’ಇದಕ್ಕೆ ಕನಿಷ್ಠ ೫೦೦೦೦ ಪೆಸೊ ಕೊಡಬೇಕು. ಇಲ್ಲದಿದ್ದರೆ ನಾನೆ ಪಟ್ಟಣಕ್ಕೆ ಹೋಗಿ ಈ ಮುತ್ತನ್ನು ಮಾರುತ್ತೇನೆ’ ಎನ್ನುತ್ತಾನೆ. ಆದರೆ ಅಂದಿನ ರಾತ್ರಿಯೇ ಹಲವರು ಅವನ ಮನೆಯಿಂದ ಮುತ್ತನ್ನು ಕದ್ದೊಯ್ಯಲು ಬಂದಾಗ ಆದ ಗಲಾಟೆಯಲ್ಲಿ ಕೀನೋ ಒಬ್ಬನನ್ನು ಕೊಂದುಬಿಡುತ್ತಾನೆ. ಊರಿನಲ್ಲಿ ಇನ್ನೂ ಉಳಿಯುವದು ಕ್ಷೇಮವಲ್ಲ ಎಂದು ತಿಳಿದು ಒಂದು ದಿನವನ್ನು ಹೇಗೋ ತನ್ನೊಬ್ಬ ಸ್ನೇಹಿತನ ಮನೆಯಲ್ಲಿ ಕಳೆದು ಯುವಾನ ಮತ್ತು ಕೊಯೊಟಿಟೊರ ಜೊತೆ ಮರು ರಾತ್ರಿಯೆ ಊರು ಬಿಡುತ್ತಾನೆ. ಮುತ್ತನ್ನು ಇವನಿಂದ ಪಡೆಯಬೇಕು ಎಂದು ಇವನ ಬೆನ್ನ ಬಿದ್ದವರು ಬಿಟ್ಟಾರೆಯೇ? ಕೀನೊಗೆ ರಾತ್ರಿ ತನ್ನ ಬೆನ್ನ ಹಿಂದೆ ಬಿದ್ದ ಮೂವರ ಸುಳಿವು ಸಿಗುತ್ತದೆ. ಹೇಗೋ ಅವರ ಹಾದಿ ತಪ್ಪಿಸಲು ಬಯಸಿ ಬೆಟ್ಟಗಳಲ್ಲಿ ಹೋದರೂ ಅವರು ಇವನ ಹಿಂದೆಯೇ ಬರುತ್ತಾರೆ. ಕೊನೆಗೆ ರಾತ್ರಿ ಚಂದ್ರೋದಯಕ್ಕೆ ಮೊದಲು ಅವರಲ್ಲಿದ್ದ ಬಂದೂಕನ್ನು ಕಿತ್ತಿಬಿಟ್ಟರೆ ಅವರನ್ನು ನಾನೇ ಕೊಂದುಬಿಡಬಹುದು ಎಂದುಕೊಳ್ಳುತ್ತಾನೆ. ಆದರೆ ವಿಧಿ ಬೇರೆಯದೇ ಆಟವನ್ನು ಹೂಡಿರುತ್ತದೆ. ಬಹಳ ಹೊತ್ತು ಸುಮ್ಮನಿರಲಾಗದ ಕೊಯೊಟಿಟೊ ಮುಲುಗಿದಾಗ ಮೂವರಲ್ಲೊಬ್ಬ ಬಂದೂಕಿನಿಂದ ಶಬ್ದ ಬಂದ ಕಡೆ ಗುಂಡು ಹಾರಿಸುತ್ತಾನೆ. ಮರು ಕ್ಷಣದಲ್ಲೇ ಕೀನೋ ಅವರ ಮೇಲೆ ಹಾರಿ ಅವರನ್ನು ಕೊಲ್ಲುತ್ತಾನೆ, ತನಗೆ ಸಿಕ್ಕ ಮುತ್ತನ್ನು ಉಳಿಸಿಕೊಳ್ಳುತ್ತಾನೆ ಆದರೆ ಬೆಲೆಕಟ್ಟಲಾಗದ ಮುತ್ತನ್ನು ಕಳೆದುಕೊಂಡಿರುತ್ತಾನೆ.

ಕಥೆಯ ಸರಳವಾಗಿ ಓದಿಸಿಕೊಂಡು ಹೋಗುತ್ತದೆ. ಕಥೆ ಹೇಳುವ ರೀತಿ ವಿಶಿಷ್ಠವಾಗಿದೆ. ಕೀನೋ ಹಾಗು ಯುವಾನರಿಗೆ ಜೀವನದ ಪ್ರತಿ ಹೆಜ್ಜೆಯಲ್ಲೂ ಅವರು ಪೂರ್ವಜರು ಬಳುವಳಿಯಾಗಿ ಕೊಟ್ಟ ಹಾಡುಗಳ ಬಗ್ಗೆ ಹೇಳುತ್ತಾ ಪಾತ್ರಗಳ ಮನಸ್ಥಿತಿಯನ್ನು ಅವುಗಳ ಮೂಲಕವೆ ಬಿಂಬಿಸುತ್ತಾನೆ ಕಥೆಗಾರ. ಸಮುದ್ರದಲ್ಲಿ ಮುತ್ತನ್ನು ಹುಡುಕುವಾಗ ಅದಕ್ಕಾಗೇ ಒಂದು ಹಾಡು, ಮುತ್ತು ಸಿಕ್ಕಾಗ ಒಂದು, ಸಿಕ್ಕ ಮುತ್ತನ್ನು ಕಾಯಬೇಕು ಎಂದಾಗ, ಬೆನ್ನ ಹಿಂದೆ ಬಿದ್ದ ಶತ್ರುಗಳ ಸುಳಿವು ಸಿಕ್ಕಾಗ ಹೊರಬರುವ ಶತ್ರುಗಳ ಹಾಡು, ಹೀಗೆ ಇಲ್ಲಿ ಆ ಹಾಡುಗಳೊಂದನ್ನೂ ಬರೆಯದೇ ಇಂಥ ಹಾಡು ಎಂದಷ್ಟೇ ಹೇಳುತ್ತ ಕಥೆಯ ಪಾತ್ರದ ಮನಸ್ಥಿತಿ ಹೇಳಿಬಿಡುತ್ತಾನೆ.

ಕಥೆಯ ಉದ್ದಕ್ಕೂ ಕಥೆಗಾರ ಹಿಂದೆಯೇ ಉಳಿದು ಕಥೆಯನ್ನಷ್ಟೇ ಹೇಳುತ್ತಾನೆ. ಆದರೆ ಎರಡು ಬಾರಿ ಕಥೆಯಲ್ಲಿ ಕಥೆಗಾರ ಸ್ಪಷ್ಟವಾಗಿ ಕಂಡುಬರುತ್ತಾನೆ. ಮುತ್ತು ಸಿಕ್ಕ ರಾತ್ರಿ ಸುತ್ತ ಸೇರಿದ ಜನ ಈ ಮುತ್ತಿನಿಂದ ಬರುವ ದುಡ್ಡಿನಿಂದ ಏನು ಮಾಡುತ್ತೀಯ ಎಂದು ಕೇಳಿದಾಗ ಕೀನೋ ಹೇಳುತ್ತಾನೆ, " ನಾನು ಮತ್ತು ಯುವಾನ ಚರ್ಚಿನಲ್ಲಿ ಮದುವೆ ಮಾಡಿಕೊಳ್ಳುತ್ತೇವೆ, ಹೊಸ ಬಟ್ಟೆ ಕೊಳ್ಳುತ್ತೇವೆ, ಒಂದು ರೈಫಲ್ ಕೊಳ್ಳುತ್ತೇನೆ’ ಎಂದೆಲ್ಲ ಹೇಳುತ್ತಾನೆ. ಮುಖ್ಯವಾಗಿ ತನ್ನ ಮಗ ಕೊಯೊಟಿಟೋಗೆ ಓದುವದನ್ನು ಕಲಿಸುತ್ತೇನೆ, ಅವನು ಓದಿ ತಿಳಿಸುತ್ತಾನೆ ಪುಸ್ತಕಗಳಲ್ಲಿ ನಿಜವಾಗಿ ಇರುವದು ಏನು ಇಲ್ಲದೆ ಇರುವದು ಏನು ಎಂದು ಎನ್ನುತ್ತಾನೆ. ಇಷ್ಟೆಲ್ಲ ಕನಸುಗಳನ್ನು ಒಮ್ಮೆಲೆ ಹೊರಹಾಕಿದ ಕೀನೋಗೆ ಒಮ್ಮಿಂದೊಮ್ಮೆಲೆ ಹೆದರಿಕೆಯಾದಂತಾಗಿ ಸುಮ್ಮನಾಗಿಬಿಡುತ್ತಾನೆ. ಆಗ ಕಥೆಗಾರ ಅವನ ಮನಸ್ಥಿತಿಯನ್ನು ಸ್ಪಷ್ಟವಾಗಿ ತಿಳಿಸುತ್ತಾನೆ, " ಕೀನೋ ತನ್ನ ಮಾತುಗಳಿಂದ ಒಂದು ಯೋಜನೆಯನ್ನು ರೂಪಿಸಿಕೊಂಡು ತನ್ನ ಮನಸ್ಸಿನ ಪಟದ ಮೇಲೆ ತನ್ನ ಹಾಗೂ ತನ್ನ ಪರಿವಾರದ ಭವಿಷ್ಯವನ್ನು ಬೀರಿದ್ದರಿಂದ ಅವನಿಗೆ ಅದು ಒಂದು ನಿಜವೇ ಈಗ. ಹಾಗೆ ಬೀರುವದರಿಂದ ಅವನು ಆ ಭವಿಷ್ಯವನ್ನು ಕಟ್ಟುವದಕ್ಕಾಗಿ, ಉಳಿಸುವದಕ್ಕಾಗಿ ತನ್ನನ್ನೇ ಬಾಧ್ಯನನ್ನಾಗಿ ಮಾಡಿಕೊಂಡ".

ಎರಡನೇ ಬಾರಿ ಕಥೆಗಾರ ನಿರ್ಣಾಯಕವಾಗಿ, ಒಂದು ರೀತಿಯಲ್ಲಿ ವಿಧಿಯಾಗಿ ಬರುತ್ತಾನೆ. ತನ್ನ ಬೆನ್ನ ಹಿಂದೆ ಬಿದ್ದ ಮೂವರಲ್ಲಿ ಇಬ್ಬರು ಮಲಗಿರುವದನ್ನೂ, ಎದ್ದು ಕುಳಿತಿರುವ ಒಬ್ಬನ ಬಳಿ ಬಂದೂಕು ಇರುವದನ್ನು ನೋಡಿ ಕೀನೋ ಆ ಬಂದೂಕನ್ನು ಕಿತ್ತಿಕೊಳ್ಳಲು ಬೆಕ್ಕಿನಂತೆ ಅವರ ಹಿಂದೆ ಹೋಗುತ್ತಾನೆ. ಚಂದ್ರ ಉದಿಸುವದಕ್ಕೂ ಮೊದಲು ಅವರ ಮೇಲೆ ಬೀಳಬೇಕು ಎಂದು ಕೀನೋ ಅಂದುಕೊಂಡಿದ್ದರೆ, ಚಂದ್ರ ಉದಿಸಿಯೇ ಬಿಡುತ್ತಾನೆ. ಅಲ್ಲಿ ಕೀನೊ ಕಳೆದುಕೊಳ್ಳುವ ಕೆಲವೇ ಕ್ಷಣ ನಿರ್ಣಾಯಕವಾಗಿಬಿಡುತ್ತವೆ. ಕೊನೆಗೊಮ್ಮೆ ಕೀನೋ ಅವರ ಮೇಲೆ ಹಾರಿದಾಗ ಬಂದೂಕಿನ ಗುಂಡು ಹಾರಿ ಆಗಿರುತ್ತದೆ. ಆ ಕ್ಷಣದಲ್ಲಿ ಕೀನೋನ ಮುತ್ತು ಕಳೆದು ಹೋಗಿರುತ್ತದೆ.

ಮನಸ್ಸಿಗೆ ಮುಟ್ಟುವ ಈ ಕಥೆ ಓದಿ ಆದ ಮೇಲೆ ಅನಿಸಿದ್ದು ಯಾಕೆ ಇದು ಹೀಗೆ ಕೊನೆಯಾಗಬೇಕಿತ್ತು? ಕಥೆಗಾರ ಕಥೆಯ ಅಂತ್ಯವನ್ನು ನಿರ್ಧರಿಸುತ್ತಾನೊ ಅಥವ ಪಾತ್ರಗಳು ತಮ್ಮ ಗಮ್ಯವನ್ನು ತಾವೇ ನಿರ್ಧರಿಸಿಕೊಳ್ಳುತ್ತವೋ? ಕಥೆಗಾರ ಇದನ್ನು ಒಂದು ಭರವಸೆ ಹುಟ್ಟಿಸುವ ಕಥೆಯಾಗಿಸಬಹುದಿತ್ತು. ಆ ಮೂವರಿಂದ ಕೀನೋ ತಪ್ಪಿಸಿಕೊಳ್ಳುವಂತೆ ಮಾಡಬಹುದಿತ್ತು. ಇಲ್ಲ ಒಂದು ರೀತಿ ಕೀನೋ ಮುತ್ತು ಮತ್ತು ಕುಟುಂಬ ಸಮೇತ ಪಟ್ಟಣವನ್ನು ತಲುಪಿದನೇ ಎನ್ನುವದನ್ನು ಓದುಗರ ಕಲ್ಪನೆಗೆ ಬಿಡುವಂತೆ ಕಥೆ ಮುಗಿಸಬಹುದಿತ್ತು. ಆದರೆ ಇದರಲ್ಲಿ ಕೊನೆಗೆ ಕೀನೋ ಸೋಲುತ್ತಾನೆ. ಅವನನ್ನು ಶೋಷಿಸುತ್ತಿದ್ದ ವ್ಯವಸ್ಥೆಯೇ ಗೆಲ್ಲುತ್ತದೆ. ಅಥವ ಕಥೆಗಾರ ಎಷ್ಟೋ ಸಾವಿರಕ್ಕೆ ಒಂದರಂತೆ ವ್ಯವಸ್ಥೆಯ ವಿರುದ್ಧ ಈಜಿ ಗೆದ್ದವರ ಬಗ್ಗೆ ಹೇಳುವ ಬದಲು ವ್ಯಸ್ಥೆಯ ಕ್ರೌರ್ಯದ ಮುಖವನ್ನು ಪೂರ್ತಿಯಾಗಿ ತೋರಿಸಲು ಈ ಅಂತ್ಯವನ್ನು ಉಪಯೋಗಿಸಿಕೊಂಡನೋ? ವ್ಯವಸ್ಥೆಯ ದಬ್ಬಾಳಿಕೆಯನ್ನು ಮೀರಿ ಹೋದ ಒಬ್ಬನ ಕಥೆ ಇದಾಗಬಹುದಿತ್ತು ಆದರೆ ಕೊನೆಗೆ ವ್ಯವಸ್ಥೆಯ ಪ್ರವಾಹದಲ್ಲಿ ಕೊಚ್ಚಿ ಹೋದ ಮತ್ತೊಬ್ಬನ ಕಥೆಯಾಗಿಬಿಡುತ್ತದೆ. ಪುಸ್ತಕದ ಹೊದಿಕೆಯ ಹಿಂಭಾಗದಲ್ಲಿ ಕಥೆಯ ಬಗ್ಗೆ ಹೀಗೆ ಬರೆದಿದೆ, " he hoped to buy peace and happiness for himself, his wife and little son. Instead he found that peace and happiness are not to be purchased. They are, themselves, pearls beyond price." ಅದು ನಿಜವೂ ಹೌದು. ಶಾಂತಿ ಮತ್ತು ಸಂತೋಷಗಳು ಹಣದಿಂದ ಕೊಳ್ಳುವಂತಹವಲ್ಲ. ಆದರೆ ಪಟ್ಟ ಪರಿಶ್ರಮಕ್ಕೆ ಬೆಲೆ ಸಿಗುತ್ತದೆ, ಮುಂದೊಮ್ಮೆ ಬಾಳು ಹಸನಾಗುತ್ತದೆ ಎನ್ನುವ ಭರವಸೆಯಾದರೂ ಬೇಕಲ್ಲವೇ ಜೀವನಕ್ಕೆ? ತನಗೆ ಸಿಕ್ಕಿರುವ ಅವಕಾಶಗಳನ್ನು ಚನ್ನಾಗಿ ಬಳಸಿಕೊಳ್ಳುವ ಪ್ರಯತ್ನದಲ್ಲೇನು ಕುಂದಿರದಿದ್ದರೂ ತನ್ನಳವು ಮೀರಿದ ಪರಿಸ್ಥಿಗೆ ಕಾರಣವಾಗುವ ವ್ಯವಸ್ಥೆ ಎಷ್ಟು ಕೀನೋಗಳನ್ನು ಸಮಾಧಿ ಮಾಡಿದೆಯೋ ಎನಿಸುತ್ತದೆ.

ಮತ್ತದೇ ಪ್ರಶ್ನೆ, ಕಥೆಗಾರ ಕಥೆಯ ಅಂತ್ಯವನ್ನು ನಿರ್ಧರಿಸುತ್ತಾನೋ ಅಥವಾ ಪಾತ್ರಗಳೋ?

Monday, December 31, 2007

ಭಕ್ರಿ ಸಮಾರಾಧನೆ

(ಇತ್ತೀಚೆಗೆ ಬಹಳ ದಿನಗಳ ನಂತರ ಭಕ್ರಿ (ಜೋಳದ ರೊಟ್ಟಿ) ತಿಂದದ್ದರ ಪರಿಣಾಮ ಈ ಬರಹ)

ಕೆಲವು ದಿವಸಗಳ ಹಿಂದೆ ನಮ್ಮ ಮನೆಯಲ್ಲಿ ಒಂದು ವಾರ ಪೂರ್ತಿ ಭಕ್ರಿ ಸಮಾರಾಧನೆ. ಹೆಚ್ಚು ಕಡಿಮೆ ಎರಡು ವರ್ಷಗಳಿಂದ ಭಕ್ರಿ ರುಚಿ ಕಾಣದ ನಾಲಿಗೆಗೆ ಭಕ್ರಿ ಔತಣ! ಇಲ್ಲಿ ಸ್ಯಾನ್ ಹೋಸೆಯಲ್ಲಿ ನನ್ನ ಹೆಂಡತಿ ಪಲ್ಲವಿ, ಬೆಂಗಳೂರಿನಲ್ಲಿ ಅವಳಣ್ಣ ರಮೇಶ ಮತ್ತು ಭಾರತ ಯಾತ್ರೆಯಿಂದ ಮರಳುತ್ತಿದ್ದ ಮಿತ್ರ ಪ್ರಮೋದ; ಇವರೆಲ್ಲರ coordination ಇಂದಾಗಿ ನನಗೆ ಭಕ್ರಿ ತಿನ್ನುವ ಯೋಗ ಒದಗಿ ಬಂದಿತ್ತು. ಆ ಭಕ್ರಿಗಳೋ ಕಟಿ ರೊಟ್ಟಿಗಳಾಗಿರದೆ ನನ್ನಮ್ಮನ ತೆಳು ಭಕ್ರಿಗಳಂತಿದ್ದು (ಹರವಿನಲ್ಲಿ ಅಮ್ಮನ ಭಕ್ರಿಗಿಂತ ಚಿಕ್ಕವಾಗಿದ್ದರೂ) ತಿನ್ನುತ್ತಿದ್ದಂತೆ ಒಮ್ಮಿಂದೊಮ್ಮೆಲೆ ೧೫-೨೦ ವರ್ಷಗಳಷ್ಟು ಹಿಂದಿನ ಗುಲ್ಬರ್ಗದ ನಮ್ಮ ಮನೆ, ಅಲ್ಲಿ ಅಡಿಗೆ ಮನೆಯಲ್ಲಿ ನೆಲದ ಮೇಲಿಟ್ಟ ಗ್ಯಾಸಿನ ಮುಂದೆ ಕುಳಿತ ಅಮ್ಮ ಜೋಳದ ಹಿಟ್ಟಿನ ಮಿನಿ ಗುಡ್ಡದಲ್ಲಿ ಒಂದು ತಗ್ಗು ಮಾಡಿ, ಅದೇ ಆಗ ಮರಳಿಸಿದ ಬಿಸಿನೀರ ಸುರಿದು, ಕೈ ಖಡಚಿಯಿಂದ ಚಕಚಕನೆ ಕಲಸಿ ಭಕ್ರಿ ಬಡಿಯಲಿಕ್ಕೆ ಸಿದ್ಧವಾಗುತ್ತಿದ್ದ ದೃಶ್ಯ ಕಂಡಾಗ ಪಲ್ಲವಿ ಮಾಡಿದ ಸೌತೆಕಾಯಿ ರಸಪಲ್ಯಕ್ಕೆ ಅಮ್ಮನ ನೆನಪೂ ಸೇರಿ ಮತ್ತಷ್ಟು ರುಚಿಯಾಯಿತು! ಭಕ್ರಿಗೆ ಬದನೆಕಾಯಿ ಪಲ್ಯ ಒಳ್ಳೆ ಸಾದನಿ ಆದರೂ ನಾನು ಸಾಮಾನ್ಯವಾಗಿ ತಿಂದ ಭಕ್ರಿ-ಮುದ್ದಿಪಲ್ಯ, ಭಕ್ರಿ-ಕಾಳು(ಮಜ್ಜಿಗೆ ಕಲೆಸಿಕೊಂಡು), ಭಕ್ರಿ-ಹುಳಿ ಮುಂತಾದ ಕಾಂಬಿನೇಶನ್ನುಗಳೇನು ಕಡಿಮೆಯಲ್ಲ. ಕಟಿ ಭಕ್ರಿ ಇದ್ದರೆ ಅದಕ್ಕೆ ಜೊತೆಗೆ ಚಟ್ನಿಪುಡಿ/ಗುರೆಳ್ಳುಪುಡಿ, ಮೊಸರು ಛೊಲೊ ಕಾಂಬಿನೇಷನ್ನು.

ಹಿಂದೊಮ್ಮೆ ಭಾರತಕ್ಕೆ ಹೋದಾಗ, ಆಗ ತಾನೆ ಇಲ್ಲಿ ಸ್ವಯಂಪಾಕದಲ್ಲಿ ಅಷ್ಟಿಷ್ಟು ಚಪಾತಿ ಮಾಡುವದನ್ನು ಕಲಿತಿದ್ದ ನನಗೆ ಭಕ್ರಿ ಯಾಕೆ ಬಡಿಯಬಾರದು ಒಂದು ಸರ್ತಿ ಅಂತ ಅನಿಸಿದಾಗ ಅಮ್ಮನನ್ನು ಒಪ್ಪಿಸಿ ಒಂದು ಭಕ್ರಿ ಬಡಿದಿದ್ದೆ. beginner's luck ಎನ್ನುವಂತೆ ಅದು ಸರಿಯಾಗಿ ಬಂದದ್ದು ಸ್ವಲ್ಪ ಕೋಡು ಮೂಡಿಸಿತ್ತು. ಸ್ಯಾನ್ ಹೋಸೆಗೆ ಮರಳಿದಾಗ ಅದೇ ಹಮ್ಮಿನಲ್ಲಿ ಇಲ್ಲಿ ಸಿಗುವ ಜೋಳದ ಹಿಟ್ಟು ಕಲಸಿ ಭಕ್ರಿ ಬಡಿಯಲು ಹೋದರೆ ಜಿಗಿ ಇಲ್ಲದ ಹಿಟ್ಟು ತಟ್ಟಿದಂತೆಲ್ಲ ಕೈಗೇ ಅಂಟಿಕೊಳ್ಳುತ್ತಿತ್ತು. ಅಂದಿನಿಂದ ಮತ್ತೆ ಇಲ್ಲಿ ಭಕ್ರಿಯ ಪ್ರಯತ್ನ ಮಾಡಿಲ್ಲ! ಇಲ್ಲಿನ ಹಿಟ್ಟನ್ನು ಕುದಿಯುವ ನೀರಿಗೆ ಹಾಕಿದರೆ ಭಕ್ರಿ ಬಡಿಯುವ ಬದಲು ಚಪಾತಿಯಂತೆ ಲಟ್ಟಿಸುವ ಹಾಗೆ ಕಲೆಸಬಹುದು ಎಂದು ಕೆಲವರು ಹೇಳಿದಾಗ ಅದನ್ನು ಪ್ರಯತ್ನಿಸಲು ಅಡ್ಡ ಬರುವದು ’ಬಡಿದರೆ ಮಾತ್ರ ಭಕ್ರಿ’ ಎನ್ನುವ ಧಿಮಾಕು! ಭಕ್ರಿಯ ಬದಲಿಗೆ ಜೋಳದ ಹಿಟ್ಟಿನ ಮುದ್ದೆಯನ್ನೊ (ಹೆಚ್ಚು ಕಡಿಮೆ ಉಪ್ಪಿಟ್ಟು ಮಾಡಿದಂತೆಯೇ ಮಾಡಬಹುದು. ಬಿಸಿ ಬಿಸಿ ಮುದ್ದೆಗೆ ತುಪ್ಪ ಮತ್ತು ಬಾಡಿಸಿಕೊಳ್ಳಲಿಕ್ಕೆ ಉಪ್ಪಿನಕಾಯಿ ಇದ್ದರೆ ಇದು ಬಲು ರುಚಿ) ಇಲ್ಲಾ ಥಾಲಿಪೆಟ್ಟುಗಳನ್ನೊ ಮಾಡಿಕೊಂಡು ಅಷ್ಟರ ಮಟ್ಟಿಗೆ ಚಪಲ ತೀರಿಸಿಕೊಂಡರೂ, ಭಕ್ರಿ ಭಕ್ರಿಯೇ.

ಇದೇನು ಭಕ್ರಿಯ ಬಗ್ಗೆ ಇಷ್ಟೊಂದು ಅನ್ನಬಹುದು ನೀವು, ಭಕ್ರಿಯ ಮಹಿಮೆಯೇ ಅಂಥಾದ್ದು. ಇಂಜಿನಿಯರಿಂಗ್ ಓದುವಾಗ ಸೆಮಿಸ್ಟರ್ ಪೂರ್ತಿ ಹಾಸ್ಟೆಲ್ಲಿನ ರಬ್ಬರ್ ಚಪಾತಿ ತಿಂದು ಬದುಕುತ್ತಿದ್ದವನು ಊರಿಗೆ ಬಂದಾಗ ಅಮ್ಮ ಅಡಿಗೆ ಏನು ಮಾಡಲಿ ಎಂದು ಕೇಳಿದಾಗ ’ಭಕ್ರಿ-ಮುದ್ದಿಪಲ್ಯ’ ಎಂದೇ ನಾನು ಹೇಳುತ್ತಿದ್ದದ್ದು! ಹಾಗೆ ಹೇಳಿದಾಗಲೆಲ್ಲ ’ಏನಣ್ಣ ನೀನು ಬಂದಿರ್ತೀಯ ಏನಾದರೂ ಸ್ಪೆಷಲ್ ತಿನ್ನಬೇಕು ಅಂತ ನಾವಂದುಕೊಂಡರೆ ದಿನ ತಿನ್ನೋ ಭಕ್ರಿ-ಮುದ್ದಿಪಲ್ಯ ಕೇಳ್ತೀಯಲ್ಲ’ ಎಂದು ನನ್ನ ತಂಗಿಯ ಕೈಯಲ್ಲಿ ಬಯ್ಯಿಸಿಕೊಂಡಿದ್ದೇನೆ. ಗದುಗಿನ ಭಾರತದಲ್ಲಿ ನಾರಣಪ್ಪ ’ಆ ದುರ್ಯೋಧನನ ಜೋಳದ ಋಣ ಇದೆ ನನ್ನ ಮೇಲೆ’ ಎಂದು ಕರ್ಣನಿಂದ ಹೇಳಿಸಿದ್ದಾನಂತೆ; ಓದಿ ನೋಡಬೇಕು ಒಂದು ಸರ್ತಿ. ಹಿಂದೆ ಜಗನ್ನಾಥದಾಸರ ಹೊಟ್ಟೆಶೂಲೆಯ ಉಪಶಮನಕ್ಕೆ ಅವರ ಗುರುಗಳಾದ ಗೋಪಾಲದಾಸರು ಕೊಟ್ಟದ್ದು ಅಭಿಮಂತ್ರಿಸಿದ ಭಕ್ರಿಯನ್ನೇ ಅಂತೆ. ತೀರ ಇತ್ತೀಚಿನ ವಿಷಯ ಹೇಳಬೇಕೆಂದರೆ, ಮಹಾರಾಷ್ಟ್ರ ಸರ್ಕಾರ ಪಂಚತಾರಾ ಹೋಟೇಲುಗಳ ಮೆನ್ಯುವಿನಲ್ಲೂ ಝುಣಕ-ಭಾಕರಾ ಕಾಂಬಿನೇಷನ್ನು ಇರಬೇಕು ಎನ್ನುವ ಕಾಯ್ದೆ ಮಾಡಿದ್ದರಲ್ಲವೇ?

ಇಷ್ಟೆಲ್ಲ ಇದ್ದರೂ ಅದು ಯಾಕೋ ಉತ್ತರಕರ್ನಾಟಕದ ಬ್ರಾಹ್ಮಣರ ಮನೆಗಳಲ್ಲಿ (ಬರಿ ಮಾಧ್ವ ಬ್ರಾಹ್ಮಣರಲ್ಲಿ ಮಾತ್ರವೂ ಅಥವ ಎಲ್ಲ ಬ್ರಾಹ್ಮಣರಲ್ಲೋ ಗೊತ್ತಿಲ್ಲ) ಹಬ್ಬದ ದಿನಗಳಲ್ಲಿ ಭಕ್ರಿ ಮಾಡುವದಿಲ್ಲ. ಶ್ರಾವಣಮಾಸ ಅಥವ ನವರಾತ್ರಿಯ ಹಬ್ಬದ ದಿನಗಳಲ್ಲಂತೂ ಎಷ್ಟೋ ದಿನಗಳ ಕಾಲ ಭಕ್ರಿ ಮಾಡುವಂತಿಲ್ಲ. ಅಂತಹ ಸಮಯದಲ್ಲಿ ಮಧ್ಯ ಎಲ್ಲಾದರು ಒಂದು ದಿನ ಭಕ್ರಿ ಮಾಡುವಂತಿದ್ದರೆ ಅವತ್ತು ಅದೊಂದು ಹಬ್ಬವೇ. ಒಮ್ಮೆ ನವರಾತ್ರಿ ಹಬ್ಬದ ದಿನಗಳಲ್ಲಿ ಒಂದು ಭಕ್ರಿ permitted day ಬಂದಾಗ ನನ್ನ ದೊಡ್ಡಪ್ಪ ’ಇವತ್ತು ಗುಂಡನ ಗೋಧಿ ಮಂಡಿಗಿ ಆಗಲಿ’ ಅಂದಿದ್ದು ಬಹಳ ಅರ್ಥಪೂರ್ಣವಾಗಿ ಕಂಡಿತ್ತು ನನಗೆ.

ಈಗ ಭಕ್ರಿ ತಿಂದು ಇಷ್ಟೆಲ್ಲ ನೆನಪಿಸಿಕೊಂಡ ಮೇಲೆ ಇನ್ನೊಮ್ಮೆ ಇಲ್ಲಿ ಭಕ್ರಿ ಬಡಿದು ಪ್ರಯತ್ನಿಸುವ ಇರಾದೆ ಇದೆ, ನೋಡಬೇಕು ಈ ಬಾರಿ ಏನಾಗುತ್ತದೋ :).

ಮುಗಿಸುವ ಮುಂಚೆ : ಸಂಪದದಲ್ಲಿ ಕೆಲವೊಮ್ಮೆ ಕನ್ನಡ, ಸಂಸ್ಕೃತ, ಅಲ್ಪಪ್ರಾಣ-ಮಹಾಪ್ರಾಣಗಳ ಚರ್ಚೆಯಲ್ಲಿ ದ್ರಾವಿಡ ಭಾಷೆಗಳಲ್ಲಿ ಮಹಾಪ್ರಾಣ ಇಲ್ಲ/ಇರಲಿಲ್ಲ/ಬೇಕಿಲ್ಲ ಎನ್ನುವದನ್ನು ನೋಡುವಾಗ ಸಸ್ಯಾಹಾರಿ ತಿನಿಸು ಭಕ್ರಿಯನ್ನು ಬಕ್ರಿ ಮಾಡದೆ ಇರುವದಕ್ಕಾದರೂ ಮಹಾಪ್ರಾಣ ಇರಬೇಕು ಅನಿಸುತ್ತದೆ ನನಗೆ ;-).

Thursday, November 29, 2007

ಹೇ ಬೇಬಿ, ಚೀನಿ ಕಮ್!

ಹೋದ ವಾರ ಥ್ಯಾಂಕ್ಸ್ ಗಿವಿಂಗ್ ವೀಕೆಂಡಿನ ಸೂಟಿ ಒಳಗ ಇವೆರಡು ಸಿನೇಮಾ ನೋಡಿದೆ. ಎರಡೂ ಒಂದು ಥರ ಹೊಸ ಕಥಿ ಅವ. ಎಂದೋ ಯಾರದೋ ಜೊತಿ ಮಲಕೊಂಡು ತಿರಿಗಿ ನೋಡ್ಲಾರದ ಆಸ್ಟ್ರೇಲಿಯಾಕ್ಕ ಬಂದ ಹೀರೋಗ ಒಂದಿನ ಮನಿ ಬಾಗ್ಲಿಗೆ ಅವ್ನಿಂದ ಅಕಿಗೆ ಹುಟ್ಟಿದ ಕೂಸು ಯಾರೋ ತಂದು ಬಿಟ್ಟು ಹೇಳ್ತಾರ, "ಮಗನ ಹುಟ್ಟಿಸಿದೀ ನೋಡಿಕೋ ಈಗ!" ಇವಾ ಒಬ್ಬವನ ಅಲ್ದ ಇವ್ನ್ ಜೊತಿಗೆ ಇನ್ನ ಇಬ್ರಿರ್ತಾರ, ಅವ್ರೂ ಅಂಥವ್ರ. ಕೂಸು ಇವಂದು ಅಂತ ಗೊತ್ತಾಗ್ಲಿಕ್ಕೆ ಇಂಟರ್ವಲ್ ತನಕ ಕಾಯಬೇಕು. ಆದರ ಚೋಟು ಲಂಗ ಕಾಟು, ಪಲಂಗ ಅಂತ ಕಂಡವರಿಗೆ ಗಾಳ ಹಾಕ್ಕೋತ ತಿರ್ಗೊವ್ರಿಗೆ ಒಮ್ಮಿಂದೊಮ್ಮೆ ಕೂಸಿನ್ನ ನೋಡ್ಕೋ ಅಂತ ಕೊಟ್ಟ್ರ ಹೆಂಗಿರ್ತದ ಅನ್ನೊದನ್ನ ಸ್ವಲ್ಪ ಮಜಾ ಬರೋ ಹಂಗ ತೋರಸ್ಲಿಕ್ಕೆ ಹೋಗಿ ಏನೇನೋ ತೋರಿಸ್ಯಾರ. ಇದೇನಪಾ ನಮಪ್ಪ ನನಗ ಸಣ್ಣವಿದ್ದಾಗ 'ಒಂದು ಗುಬ್ಬಿ ಬಂತು, ಒಂದು ಕಾಳು ತೊಗೊಂಡು ಹೋತು' ಅಂತ ಮುಗೀಲಾರದ ಕತಿ ಹೇಳಿದಂಗ ಇವ್ರೂ 'ಕೂಸು ಅತ್ತು, ತಿಂತು, ನಕ್ತು, ಮಾಡ್ಕೊಂಡ್ತು, ಒರಿಸಿದ್ರು' ಅನ್ನೊದನ್ನ ತಿರಗಾ ಮುರಗಿ ತೋರಸ್ತಾರಲ್ಲ ಅಂದ್ಕೊಳ್ಳೊದ್ರೊಳಗ ಹೀರೋ ಅಕ್ಷಯ್ ಕುಮಾರನ ಕೂಸಿನ ತಂದಿ ಅಂತ ತಿಳಿಸಿ ಕತಿ ಮುಂದ ಓಡ್ಸಿ ಛೊಲೊ ಮಾಡ್ಯಾರ. ಒಟ್ಟಿನ್ಯಾಗ ಮದ್ಲಿನ ಸ್ವಲ್ಪ ಹೊತ್ತು ಅತೀ ಆತೇನೋ ಅನ್ನೊದ್ ಬಿಟ್ಟ್ರ ಒಂದ್ಸರ್ತಿ ನೋಡ್ಬಹುದು. ಅಧಂಗ ಹೇಳ್ಲೇ ಇಲ್ಲ ನೋಡು, ಸೆಕೆಂಡ್ ಹಾಫ್ ವಿದ್ಯಾ ಬಾಲನ್ ಬರ್ತಾಳ, ಕೂಸಿನ ತಾಯಿ ಆಗಿ.

ಇನ್ನ ಚೀನಿ ಕಮ್ ಹಿಡಿಸ್ತು. ಅಪರೂಪಕ್ಕ ಅಮಿತಾಭ ಬಚ್ಚನ್ ಓವರ್ ಆಕ್ಟಿಂಗ್ ಕಮ್ಮಿ ಮಾಡ್ಯಾನ. ಟಬ್ಬು ತನ್ನ ಮಾಮೂಲಿ ಸ್ಟ್ಯಾಂಡರ್ಡ್ ಉಳಿಸಿಕೊಂಡಾಳ. ಅತೀ ಕಡಿಮಿ ಎಮೋಶನಲ್ ಡೈಲಾಗಿನೊಳಗ ಮನಸ್ಸಿನ ಪದರ ಪದರ ಬಿಚ್ಚಿ ಇಡೋ ಅಂಥ ಸಿಚುವೇಶನ್ ನೋಡಿದರ ಎರಿಕ್ ಸೆಗಾಲನ 'ಲವ್ ಸ್ಟೋರಿ' ನೆನಪಾಯ್ತು. ಬ್ಲಡ್ ಕ್ಯಾನ್ಸರಿಗೆ ಸಿಕ್ಕು ಇವತ್ತೋ ನಾಳೆನೋ ಅಂತ ಕಾಯ್ತಿರೋ 'ಸೆಕ್ಸಿ' ಅನ್ನೋ ಹೆಸರಿನ ಚೋಟುದ್ದ ಹುಡುಗಿ ೬೪ ವಯಸ್ಸಿನ ಹೀರೋಗ ಊರುಗೋಲಾಗ್ತಾಳ, ಒಂದು ರೀತಿ ಕಳದು ಹೋಗ್ತಿರೋ ಅವನ್ದೇ ಟೈಮಿನ ಪ್ರತೀಕನೂ ಆಗ್ತಾಳ. ಮಾವ ಆಗೋವ ೫೮ ವರ್ಷದವ, ಹುಡುಗಿ ೩೪, ಹುಡುಗ (?) ೬೪, ಅವನಮ್ಮ ಎಂಭತ್ತೈದೊ ತೊಂಭತ್ತೊ, ಜೊತಿಗೆ ೭-೮ರ ಅಮೂಲ್ಯ ಸೆಕ್ಸಿ. ಕಡಿ ತನಕ ಸಿನಿಮಾದ ಹದ ಉಳಸೋದು ಅದರ ಓಟ. ಚೀನಿ ಕಮ್ ಆದರೂ ಕ್ಯಾಲರಿಗೇನು ಕಮ್ಮಿ ಇಲ್ಲ!

Sunday, November 18, 2007

ಓಲ್ಡ್ ಮ್ಯಾನ್ ಆಂಡ್ ದಿ ಸೀ

ನಿನ್ನೆ ಅರ್ನೆಸ್ಟ್ ಹೆಮಿಂಗ್ವೆಯ ನೋಬೆಲ್ ವಿಜೇತ ಪುಸ್ತಕ ’ದಿ ಓಲ್ಡ್ ಮ್ಯಾನ್ ಆಂಡ್ ದಿ ಸೀ’ ಓದಿದೆ. ಸುಮಾರು ನೂರ ಹತ್ತು ಪುಟಗಳ ಪುಸ್ತಕ ಅದ್ಭುತವಾದ ರೇಖಾಚಿತ್ರಗಳೊಡನೆ ಕೂಡಿದ್ದು ಕೊನೆಯವರೆಗೂ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಹಿಂದೊಮ್ಮೆ ಕಸ್ತೂರಿಯಲ್ಲಿ ಇದರ ಕನ್ನಡ ಅನುವಾದ ಪ್ರಕಟವಾಗಿತ್ತು. ಅದನ್ನು ಓದಿದ್ದು ಅರ್ಧರ್ಧ ನೆನಪಿದೆ ಎಂದುಕೊಂಡು ಎಷ್ಟೋ ಸಾರಿ ಮೂಲದ ಇಂಗ್ಲೀಷ್ ಪುಸ್ತಕ ಓದುವಬಗ್ಗೆ ಯೋಚಿಸಿರಲಿಲ್ಲ. ನಾನೆಷ್ಟು ತಪ್ಪು ತಿಳಿದುಕೊಂಡಿದ್ದೆ ಎನ್ನುವದು ಮೊದಲ ಕೆಲವು ಪುಟಗಳಲ್ಲೇ ತಿಳಿದು ಹೋಯಿತು.

ಸತತ ೮೪ ದಿನಗಳ ಕಾಲ ದಿನವೂ ಸಮುದ್ರಕ್ಕೆ ಹೋಗಿ ಒಂದೂ ಮೀನಿಲ್ಲದೆ ಬರುತ್ತಿದ್ದ ಸಾಂಟಿಯಾಗೋ ಎನ್ನುವ ಮುದುಕನ ಕತೆ ಇದು. ೮೫ನೇ ದಿನ ಅವನ ಅದೃಷ್ಟ ಪರೀಕ್ಷಿಸುತ್ತದೆ. ಎಂದೂ ಹಿಡಿರದಂತಹ ಮೀನೊಂದು ಅವನ ಗಾಳವನ್ನು ಕಚ್ಚುತ್ತದೆ. ಸಾಮಾನ್ಯ ಮೀನಲ್ಲ ಅದು. ಸರಳವಾಗಿ ಕೈಗೆ ಸಿಗುವದೂ ಅಲ್ಲ. ಮೂರು ದಿನಗಳ ಕಾಲ ಮುದುಕನ ಶಕ್ತಿ, ಯುಕ್ತಿ, ತಾಳ್ಮೆಗಳನ್ನು ಒರೆಗೆ ಹಚ್ಚುತ್ತದೆ. ಕೊನೆಗೆ ಮುದುಕನ ಕೈಯೇ ಮೇಲಾಗುತ್ತದೆ. ಇಷ್ಟಾದರೂ ಮುದುಕನಿಗೆ ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎಂದಂತೆ ಹಿಡಿದ ೧೫೦೦ ಪೌಂಡಿನ ಮೀನು ಶಾರ್ಕುಗಾಳ ಬಾಯಿಗೆ ಆಹಾರವಾಗಿ ಬರೀ ಮೀನಿನ ತಲೆ ಮತ್ತು ಅಸ್ಥಿಪಂಜರ ಉಳಿಯುತ್ತದೆ. ಮುದುಕ ಸರಳವಾಗಿ ಸೋಲೊಪ್ಪುವಂಥವನಲ್ಲ. ಮೂರು ನಾಲ್ಕು ಶಾರ್ಕುಗಳನ್ನೂ ಕೊಲ್ಲುತ್ತಾನೆ ಆದರೆ ಪ್ರತಿಯೊಂದು ಶಾರ್ಕ್ ಅಷ್ಟಿಷ್ಟು ತಿಂದು ಹಾಕುತ್ತದೆ.

ಸರಳವಾದ ಕಥೆ ಓದುತ್ತ ಹೋದಂತೆ ಹಿಡಿದಿಟ್ಟುಕೊಳ್ಳುತ್ತದೆ. ಕಥಾನಾಯಕ ಸಾಂಟಿಯಾಗೋನ ಕೌಶಲ್ಯವನ್ನು ಉತ್ಪ್ರೇಕ್ಷಿಸಲು ಹಲವು ಸಂದರ್ಭಗಳಿದ್ದರೂ ಎಲ್ಲೆಡೆ ಕಾಣುವದು ತಣ್ಣನೆಯ matter of fact ನಿರೂಪಣೆ. ಹಾಗೆ ಹೇಳದೇ ಹೋಗಿದ್ದರೆ ಮುದುಕನ ಸಾಮರ್ಥ್ಯಕ್ಕೆ ಅವಮಾನವಾಗುತ್ತಿತ್ತು ಎನಿಸುತ್ತದೆ. ಸತತ ಮೂರು ದಿನಗಳ ಕಾಲ ಗಾಳದ ಒಂದು ತುದಿ ಮೀನಿನ ಬಾಯಲ್ಲಿ ಮತ್ತು ಇನ್ನೊಂದು ತುದಿ ಮುದುಕನ ಕೈಯಲ್ಲಿ. ಎಲ್ಲೂ ನಿಲ್ಲದೆ ಎಳೆದುಕೊಂಡು ಹೋಗುವ ಮೀನಿಗೆ ಮುದುಕ ಹೇಳುವ ಮಾತುಗಳಲ್ಲಿ ಮುದುಕನ ತಲೆ ಮೀನಿನ ಜಾಡು ಹಿಡಿಯುವದರಲ್ಲೇ ನೆರೆತದ್ದರ ಅರಿವಾಗುತ್ತದೆ.

ನನಗೆ ಬಹಳ ಇಷ್ಟವಾದದ್ದು ಮುದುಕ ಮೀನಿನ ಜೊತೆಗೆ (ತನಗೆ ತಾನೇ ಕೂಡ) ಆಡುವ ಮಾತುಗಳು.

ಯಾವುದೇ ತರಹದ ಬಳಲುವಿಕೆಯೇ ಇಲ್ಲದಂತೆ ತನ್ನನ್ನೂ, ತನ್ನ ಪುಟ್ಟ ಹಡಗನ್ನೂ ಆ ಮೀನು ಸತತವಾಗಿ ಎಳೆದುಕೊಂಡು ಹೋಗುತ್ತಿರುವಾಗ ತನಗೇ ತಾನೆ ಹುರಿದುಂಬಿಸಿಕೊಳ್ಳುತ್ತಾನೆ. "ಆ ಹುಡುಗನಿಗೆ ನಾನೊಬ್ಬ ವಿಚಿತ್ರ ಮುದುಕ ಅಂತ ಹೇಳಿದೆ. ಈಗ ಅದನ್ನು ಸಾಧಿಸಿ ತೋರಿಸುವ ಕಾಲ ಬಂದಿದೆ. ಹಿಂದೆ ಎಷ್ಟು ಬಾರಿ ತೋರಿಸಿದ್ದೇನೆ ಎನ್ನುವದರಿಂದೇನೂ ಉಪಯೋಗವಿಲ್ಲ. ಪ್ರತಿಬಾರಿಯೂ ಹೊಸದಾಗಿ ಸಾಧಿಸಬೇಕು."

ಮೊದಲ ಶಾರ್ಕನ್ನು ಕೊಂದಾದ ಮೇಲೆ ಮುದುಕನಿಗೆ ಶಾರ್ಕ್ ತಿಂದು ಹರಿದಿರುವ ಮೀನಿನ ದೇಹ ನೋಡಿದಾಗ ಏನೋ ಪಾಪಪ್ರಜ್ಞೆ. ಅಷ್ಟರಲ್ಲೇ ಇನ್ನೂ ಪೂರ್ತಿ ಇದ್ದ ಮುಂಭಾಗ ನೋಡಿದಾಗ ಮತ್ತೆ ಹುರುಪು ಬರುತ್ತದೆ. ತನಗೆ ತಾನೇ ಹೇಳಿಕೊಳ್ಳುತ್ತಾನೆ, " ನಂಬಿಕೆಯನ್ನು ಪೂರ್ತಿ ಕಳೆದುಕೊಳ್ಳುವದು ಮೂರ್ಖತನ! ಅಲ್ಲದೆ ಅದು ಪಾಪವೂ ಹೌದು ಎಂದುಕೊಳ್ಳುತ್ತೇನೆ." ಪಾಪ-ಪುಣ್ಯಗಳ ಸೆಳವಿಗೆ ಅರಿವಿಲ್ಲದಂತೆಯೆ ಕಾಲಿಟ್ಟು ಮರುಕ್ಷಣ ಅಂದುಕೊಳ್ಳುತ್ತಾನೆ, "ಪಾಪಗಳ ಬಗ್ಗೆ ಯೋಚಿಸದಿರು ಈಗ. ಈಗಾಗಲೆ ಸಾಕಷ್ಟು ತೊಂದರೆಗಳಿಗೆ ಸಿಲುಕಿದ್ದೇನೆ. ಅದೂ ಅಲ್ಲದೆ ನಾನು ಪಾಪ ಪುಣ್ಯಗಳಲ್ಲಿ ನಂಬಿಕೆ ಇಟ್ಟಿದ್ದೇನೋ ಇಲ್ಲವೋ ಎನ್ನುವದು ನನಗೇ ಗೊತ್ತಿಲ್ಲ! ನಾನು ಈ ಮೀನನ್ನು ಕೊಂದಿದ್ದು ಇದರಿಂದ ಬಹಳಷ್ಟು ಜನರ ಹೊಟ್ಟೆ ತುಂಬುತ್ತದೆ ಎಂದು. ಒಂದು ಬಾರಿ ಕೊಂದಾದ ಮೇಲೆ ಪಾಪ-ಪುಣ್ಯಗಳನ್ನು ಮೀರಿ ಬಹಳ ಹಾದಿ ಬಂದಾಗಿದೆ!" ಯಾಕೆ ಇದೆಲ್ಲ ಯೋಚನೆ ಮಾಡಬೇಕು ಸುಮ್ಮನೆ ಕುಳಿತರಾಗದೇ ಎಂದುಕೊಳ್ಳುತ್ತಾನೆ. ಆದರೆ ಮತ್ತು ಸ್ವಲ್ಪ ಹೊತ್ತಿನಲ್ಲೇ ಹೇಳಿಕೊಳ್ಳುತ್ತಾನೆ; "ನೀನೇನೂ ಕೇವಲ ಊಟಕ್ಕಾಗಿ ಈ ಮೀನನ್ನು ಕೊಂದಿಲ್ಲ. ನಿನ್ನ ಆತ್ಮಗೌರವಕ್ಕಾಗೂ ಕೊಂದಿದ್ದೀಯ. ನೀನೊಬ್ಬ ಮೀನುಗಾರ ನೆನಪಿರಲಿ. ಅದು ಬದುಕಿದ್ದಾಗಲೂ ನೀನದನ್ನು ಪ್ರೀತಿಸಿದ್ದೆ. ಈಗ ಅದು ಸತ್ತಾಗಲೂ ನೀನದನ್ನು ಪ್ರೀತಿಸುತ್ತಿದ್ದೀಯ. ನೀನದನ್ನು ಪ್ರೀತಿಸಿದ್ದರೆ ಅದನ್ನು ಕೊಂದದ್ದೇನೂ ಪಾಪವಲ್ಲ. ಅಥವಾ ದೊಡ್ಡ ಪಾಪವೇ?" ಹೀಗೆ ಸರಿ-ತಪ್ಪುಗಳ, ಪುಣ್ಯ-ಪಾಪಗಳ ನಡುವಿನ ಮಸುಕು ಗೆರೆಗಳ ಅತ್ತಿತ್ತ ಓಲಾಡುವ ವಿಚಾರ ಸರಣಿ ಜೀವನದ ವೈರುಧ್ಯಗಳ ಪ್ರತೀಕದಂತಿದೆ!

ಮೀನನ್ನು ತಿನ್ನದ, ಮೀನು ಹಿಡಿಯುವವರ ಪಾಡಿನ ಅರಿವು ಅಷ್ಟಿರದ ನನಗೆ ಈ ಪುಸ್ತಕ ಹೊಸದೊಂದು ಲೋಕವನ್ನು ತೆರೆದಿಟ್ಟಿದೆ!

Tuesday, September 25, 2007

ಮೂರ್ತಿ

ನಿತ್ಯ ನೂತನವಿದು ಅಶ್ವತ್ಥ
ನಿತ್ಯ ಜನನ ಮರಣ ರಂಗ
ಬಿತ್ತಿ ಬೆಳೆದು ಸೆಳೆವ ಮಧ್ಯೆ
ವ್ಯಕ್ತ ಮೂರ್ತಿ ಸಾಧನೆಗೆ ರಂಗ

ಕಷ್ಟ ಸುಖ ಇಷ್ಟ ಅನಿಷ್ಟ
ಕಾಣದ ಕೈ ಉಳಿಯ ಏಟು
ನಿತ್ಯ ನಿತ್ಯ ಹೊಸತು ಪಾಠ
ಕಲಿತ ಹೊರತು ನಿಲ್ಲದಾಟ

ಹತ್ತು ಹಲವು ಮೆಟ್ಟಿಲುಗಳ
ಹತ್ತಿ ಇಳಿದುದ ಮತ್ತೆ ಹತ್ತಿ
ಹುಟ್ಟಿಸಿದಾತನ ಭಕ್ತಿಯಲ್ಲಿ
ಕಟ್ಟಿ, ಸಾವ ಗೆಲ್ಲುವ ತನಕ

ಹೊಡೆಯೊ ನಿನ್ನ ಚಾಣ ಬಿಡದೆ;
ಕಡೆಗೆ ಎದೆಯ ಗೂಡ ಮಧ್ಯೆ
ಬಿಡದೆ ತೋರ್ವ ಬಿಂಬ ಮೂರ್ತಿ
ಕಡೆಯೊ ಎನ್ನ ಬಾಳ ಪೂರ್ತಿ

Friday, August 03, 2007

ಟ್ರಾಫಿಕ್

ಮೈಲುದ್ದ ನಿಂತ ಕಾರುಗಳ ಮಧ್ಯೆ
ನಿಂತು ನಿಂತು ಇಂಚಿಂಚೆ ಮುಂದೆ ಸರಿವ
ಟ್ರಾಫಿಕ್ಕಿನಲ್ಲಿ ಸಿಲುಕಿದ್ದಾಗ ನೆನಪಾದದ್ದು
'ತದೇಜತಿ ತನ್ನೇಜತಿ'

ಖಾಲಿ ರಸ್ತೆಯಲ್ಲಿ ೬೫ರ ವೇಗದಲ್ಲಿ
ಹತ್ತೇನಿಮಿಷಗಳಲ್ಲಿ ತಲುಪುವ ಮನೆ
ಬಲು ದೂರ ಎನಿಸಿದಾಗ ನೆನಪಾದದ್ದು
'ತದ್ದೂರೇ ತದ್ವಂತಿಕೆ'

ಎರಡು ಒಂದು ಎರಡು; ಅಪರೂಪಕ್ಕೊಮ್ಮೊಮ್ಮೆ
ಮೂರು ಎಂದು ಸತತ ಬದಲಿಸುತ್ತ ಗೇರು
ಕೊನೆಗೊಮ್ಮೆ ಎಕ್ಸಿಟ್ಟಿಗಿಳಿದಾಗ ಅನಿಸಿದ್ದು
'ಕೃತೋ ಸ್ಮರ ಕೃತಂ ಸ್ಮರ'