Monday, December 31, 2007

ಭಕ್ರಿ ಸಮಾರಾಧನೆ

(ಇತ್ತೀಚೆಗೆ ಬಹಳ ದಿನಗಳ ನಂತರ ಭಕ್ರಿ (ಜೋಳದ ರೊಟ್ಟಿ) ತಿಂದದ್ದರ ಪರಿಣಾಮ ಈ ಬರಹ)

ಕೆಲವು ದಿವಸಗಳ ಹಿಂದೆ ನಮ್ಮ ಮನೆಯಲ್ಲಿ ಒಂದು ವಾರ ಪೂರ್ತಿ ಭಕ್ರಿ ಸಮಾರಾಧನೆ. ಹೆಚ್ಚು ಕಡಿಮೆ ಎರಡು ವರ್ಷಗಳಿಂದ ಭಕ್ರಿ ರುಚಿ ಕಾಣದ ನಾಲಿಗೆಗೆ ಭಕ್ರಿ ಔತಣ! ಇಲ್ಲಿ ಸ್ಯಾನ್ ಹೋಸೆಯಲ್ಲಿ ನನ್ನ ಹೆಂಡತಿ ಪಲ್ಲವಿ, ಬೆಂಗಳೂರಿನಲ್ಲಿ ಅವಳಣ್ಣ ರಮೇಶ ಮತ್ತು ಭಾರತ ಯಾತ್ರೆಯಿಂದ ಮರಳುತ್ತಿದ್ದ ಮಿತ್ರ ಪ್ರಮೋದ; ಇವರೆಲ್ಲರ coordination ಇಂದಾಗಿ ನನಗೆ ಭಕ್ರಿ ತಿನ್ನುವ ಯೋಗ ಒದಗಿ ಬಂದಿತ್ತು. ಆ ಭಕ್ರಿಗಳೋ ಕಟಿ ರೊಟ್ಟಿಗಳಾಗಿರದೆ ನನ್ನಮ್ಮನ ತೆಳು ಭಕ್ರಿಗಳಂತಿದ್ದು (ಹರವಿನಲ್ಲಿ ಅಮ್ಮನ ಭಕ್ರಿಗಿಂತ ಚಿಕ್ಕವಾಗಿದ್ದರೂ) ತಿನ್ನುತ್ತಿದ್ದಂತೆ ಒಮ್ಮಿಂದೊಮ್ಮೆಲೆ ೧೫-೨೦ ವರ್ಷಗಳಷ್ಟು ಹಿಂದಿನ ಗುಲ್ಬರ್ಗದ ನಮ್ಮ ಮನೆ, ಅಲ್ಲಿ ಅಡಿಗೆ ಮನೆಯಲ್ಲಿ ನೆಲದ ಮೇಲಿಟ್ಟ ಗ್ಯಾಸಿನ ಮುಂದೆ ಕುಳಿತ ಅಮ್ಮ ಜೋಳದ ಹಿಟ್ಟಿನ ಮಿನಿ ಗುಡ್ಡದಲ್ಲಿ ಒಂದು ತಗ್ಗು ಮಾಡಿ, ಅದೇ ಆಗ ಮರಳಿಸಿದ ಬಿಸಿನೀರ ಸುರಿದು, ಕೈ ಖಡಚಿಯಿಂದ ಚಕಚಕನೆ ಕಲಸಿ ಭಕ್ರಿ ಬಡಿಯಲಿಕ್ಕೆ ಸಿದ್ಧವಾಗುತ್ತಿದ್ದ ದೃಶ್ಯ ಕಂಡಾಗ ಪಲ್ಲವಿ ಮಾಡಿದ ಸೌತೆಕಾಯಿ ರಸಪಲ್ಯಕ್ಕೆ ಅಮ್ಮನ ನೆನಪೂ ಸೇರಿ ಮತ್ತಷ್ಟು ರುಚಿಯಾಯಿತು! ಭಕ್ರಿಗೆ ಬದನೆಕಾಯಿ ಪಲ್ಯ ಒಳ್ಳೆ ಸಾದನಿ ಆದರೂ ನಾನು ಸಾಮಾನ್ಯವಾಗಿ ತಿಂದ ಭಕ್ರಿ-ಮುದ್ದಿಪಲ್ಯ, ಭಕ್ರಿ-ಕಾಳು(ಮಜ್ಜಿಗೆ ಕಲೆಸಿಕೊಂಡು), ಭಕ್ರಿ-ಹುಳಿ ಮುಂತಾದ ಕಾಂಬಿನೇಶನ್ನುಗಳೇನು ಕಡಿಮೆಯಲ್ಲ. ಕಟಿ ಭಕ್ರಿ ಇದ್ದರೆ ಅದಕ್ಕೆ ಜೊತೆಗೆ ಚಟ್ನಿಪುಡಿ/ಗುರೆಳ್ಳುಪುಡಿ, ಮೊಸರು ಛೊಲೊ ಕಾಂಬಿನೇಷನ್ನು.

ಹಿಂದೊಮ್ಮೆ ಭಾರತಕ್ಕೆ ಹೋದಾಗ, ಆಗ ತಾನೆ ಇಲ್ಲಿ ಸ್ವಯಂಪಾಕದಲ್ಲಿ ಅಷ್ಟಿಷ್ಟು ಚಪಾತಿ ಮಾಡುವದನ್ನು ಕಲಿತಿದ್ದ ನನಗೆ ಭಕ್ರಿ ಯಾಕೆ ಬಡಿಯಬಾರದು ಒಂದು ಸರ್ತಿ ಅಂತ ಅನಿಸಿದಾಗ ಅಮ್ಮನನ್ನು ಒಪ್ಪಿಸಿ ಒಂದು ಭಕ್ರಿ ಬಡಿದಿದ್ದೆ. beginner's luck ಎನ್ನುವಂತೆ ಅದು ಸರಿಯಾಗಿ ಬಂದದ್ದು ಸ್ವಲ್ಪ ಕೋಡು ಮೂಡಿಸಿತ್ತು. ಸ್ಯಾನ್ ಹೋಸೆಗೆ ಮರಳಿದಾಗ ಅದೇ ಹಮ್ಮಿನಲ್ಲಿ ಇಲ್ಲಿ ಸಿಗುವ ಜೋಳದ ಹಿಟ್ಟು ಕಲಸಿ ಭಕ್ರಿ ಬಡಿಯಲು ಹೋದರೆ ಜಿಗಿ ಇಲ್ಲದ ಹಿಟ್ಟು ತಟ್ಟಿದಂತೆಲ್ಲ ಕೈಗೇ ಅಂಟಿಕೊಳ್ಳುತ್ತಿತ್ತು. ಅಂದಿನಿಂದ ಮತ್ತೆ ಇಲ್ಲಿ ಭಕ್ರಿಯ ಪ್ರಯತ್ನ ಮಾಡಿಲ್ಲ! ಇಲ್ಲಿನ ಹಿಟ್ಟನ್ನು ಕುದಿಯುವ ನೀರಿಗೆ ಹಾಕಿದರೆ ಭಕ್ರಿ ಬಡಿಯುವ ಬದಲು ಚಪಾತಿಯಂತೆ ಲಟ್ಟಿಸುವ ಹಾಗೆ ಕಲೆಸಬಹುದು ಎಂದು ಕೆಲವರು ಹೇಳಿದಾಗ ಅದನ್ನು ಪ್ರಯತ್ನಿಸಲು ಅಡ್ಡ ಬರುವದು ’ಬಡಿದರೆ ಮಾತ್ರ ಭಕ್ರಿ’ ಎನ್ನುವ ಧಿಮಾಕು! ಭಕ್ರಿಯ ಬದಲಿಗೆ ಜೋಳದ ಹಿಟ್ಟಿನ ಮುದ್ದೆಯನ್ನೊ (ಹೆಚ್ಚು ಕಡಿಮೆ ಉಪ್ಪಿಟ್ಟು ಮಾಡಿದಂತೆಯೇ ಮಾಡಬಹುದು. ಬಿಸಿ ಬಿಸಿ ಮುದ್ದೆಗೆ ತುಪ್ಪ ಮತ್ತು ಬಾಡಿಸಿಕೊಳ್ಳಲಿಕ್ಕೆ ಉಪ್ಪಿನಕಾಯಿ ಇದ್ದರೆ ಇದು ಬಲು ರುಚಿ) ಇಲ್ಲಾ ಥಾಲಿಪೆಟ್ಟುಗಳನ್ನೊ ಮಾಡಿಕೊಂಡು ಅಷ್ಟರ ಮಟ್ಟಿಗೆ ಚಪಲ ತೀರಿಸಿಕೊಂಡರೂ, ಭಕ್ರಿ ಭಕ್ರಿಯೇ.

ಇದೇನು ಭಕ್ರಿಯ ಬಗ್ಗೆ ಇಷ್ಟೊಂದು ಅನ್ನಬಹುದು ನೀವು, ಭಕ್ರಿಯ ಮಹಿಮೆಯೇ ಅಂಥಾದ್ದು. ಇಂಜಿನಿಯರಿಂಗ್ ಓದುವಾಗ ಸೆಮಿಸ್ಟರ್ ಪೂರ್ತಿ ಹಾಸ್ಟೆಲ್ಲಿನ ರಬ್ಬರ್ ಚಪಾತಿ ತಿಂದು ಬದುಕುತ್ತಿದ್ದವನು ಊರಿಗೆ ಬಂದಾಗ ಅಮ್ಮ ಅಡಿಗೆ ಏನು ಮಾಡಲಿ ಎಂದು ಕೇಳಿದಾಗ ’ಭಕ್ರಿ-ಮುದ್ದಿಪಲ್ಯ’ ಎಂದೇ ನಾನು ಹೇಳುತ್ತಿದ್ದದ್ದು! ಹಾಗೆ ಹೇಳಿದಾಗಲೆಲ್ಲ ’ಏನಣ್ಣ ನೀನು ಬಂದಿರ್ತೀಯ ಏನಾದರೂ ಸ್ಪೆಷಲ್ ತಿನ್ನಬೇಕು ಅಂತ ನಾವಂದುಕೊಂಡರೆ ದಿನ ತಿನ್ನೋ ಭಕ್ರಿ-ಮುದ್ದಿಪಲ್ಯ ಕೇಳ್ತೀಯಲ್ಲ’ ಎಂದು ನನ್ನ ತಂಗಿಯ ಕೈಯಲ್ಲಿ ಬಯ್ಯಿಸಿಕೊಂಡಿದ್ದೇನೆ. ಗದುಗಿನ ಭಾರತದಲ್ಲಿ ನಾರಣಪ್ಪ ’ಆ ದುರ್ಯೋಧನನ ಜೋಳದ ಋಣ ಇದೆ ನನ್ನ ಮೇಲೆ’ ಎಂದು ಕರ್ಣನಿಂದ ಹೇಳಿಸಿದ್ದಾನಂತೆ; ಓದಿ ನೋಡಬೇಕು ಒಂದು ಸರ್ತಿ. ಹಿಂದೆ ಜಗನ್ನಾಥದಾಸರ ಹೊಟ್ಟೆಶೂಲೆಯ ಉಪಶಮನಕ್ಕೆ ಅವರ ಗುರುಗಳಾದ ಗೋಪಾಲದಾಸರು ಕೊಟ್ಟದ್ದು ಅಭಿಮಂತ್ರಿಸಿದ ಭಕ್ರಿಯನ್ನೇ ಅಂತೆ. ತೀರ ಇತ್ತೀಚಿನ ವಿಷಯ ಹೇಳಬೇಕೆಂದರೆ, ಮಹಾರಾಷ್ಟ್ರ ಸರ್ಕಾರ ಪಂಚತಾರಾ ಹೋಟೇಲುಗಳ ಮೆನ್ಯುವಿನಲ್ಲೂ ಝುಣಕ-ಭಾಕರಾ ಕಾಂಬಿನೇಷನ್ನು ಇರಬೇಕು ಎನ್ನುವ ಕಾಯ್ದೆ ಮಾಡಿದ್ದರಲ್ಲವೇ?

ಇಷ್ಟೆಲ್ಲ ಇದ್ದರೂ ಅದು ಯಾಕೋ ಉತ್ತರಕರ್ನಾಟಕದ ಬ್ರಾಹ್ಮಣರ ಮನೆಗಳಲ್ಲಿ (ಬರಿ ಮಾಧ್ವ ಬ್ರಾಹ್ಮಣರಲ್ಲಿ ಮಾತ್ರವೂ ಅಥವ ಎಲ್ಲ ಬ್ರಾಹ್ಮಣರಲ್ಲೋ ಗೊತ್ತಿಲ್ಲ) ಹಬ್ಬದ ದಿನಗಳಲ್ಲಿ ಭಕ್ರಿ ಮಾಡುವದಿಲ್ಲ. ಶ್ರಾವಣಮಾಸ ಅಥವ ನವರಾತ್ರಿಯ ಹಬ್ಬದ ದಿನಗಳಲ್ಲಂತೂ ಎಷ್ಟೋ ದಿನಗಳ ಕಾಲ ಭಕ್ರಿ ಮಾಡುವಂತಿಲ್ಲ. ಅಂತಹ ಸಮಯದಲ್ಲಿ ಮಧ್ಯ ಎಲ್ಲಾದರು ಒಂದು ದಿನ ಭಕ್ರಿ ಮಾಡುವಂತಿದ್ದರೆ ಅವತ್ತು ಅದೊಂದು ಹಬ್ಬವೇ. ಒಮ್ಮೆ ನವರಾತ್ರಿ ಹಬ್ಬದ ದಿನಗಳಲ್ಲಿ ಒಂದು ಭಕ್ರಿ permitted day ಬಂದಾಗ ನನ್ನ ದೊಡ್ಡಪ್ಪ ’ಇವತ್ತು ಗುಂಡನ ಗೋಧಿ ಮಂಡಿಗಿ ಆಗಲಿ’ ಅಂದಿದ್ದು ಬಹಳ ಅರ್ಥಪೂರ್ಣವಾಗಿ ಕಂಡಿತ್ತು ನನಗೆ.

ಈಗ ಭಕ್ರಿ ತಿಂದು ಇಷ್ಟೆಲ್ಲ ನೆನಪಿಸಿಕೊಂಡ ಮೇಲೆ ಇನ್ನೊಮ್ಮೆ ಇಲ್ಲಿ ಭಕ್ರಿ ಬಡಿದು ಪ್ರಯತ್ನಿಸುವ ಇರಾದೆ ಇದೆ, ನೋಡಬೇಕು ಈ ಬಾರಿ ಏನಾಗುತ್ತದೋ :).

ಮುಗಿಸುವ ಮುಂಚೆ : ಸಂಪದದಲ್ಲಿ ಕೆಲವೊಮ್ಮೆ ಕನ್ನಡ, ಸಂಸ್ಕೃತ, ಅಲ್ಪಪ್ರಾಣ-ಮಹಾಪ್ರಾಣಗಳ ಚರ್ಚೆಯಲ್ಲಿ ದ್ರಾವಿಡ ಭಾಷೆಗಳಲ್ಲಿ ಮಹಾಪ್ರಾಣ ಇಲ್ಲ/ಇರಲಿಲ್ಲ/ಬೇಕಿಲ್ಲ ಎನ್ನುವದನ್ನು ನೋಡುವಾಗ ಸಸ್ಯಾಹಾರಿ ತಿನಿಸು ಭಕ್ರಿಯನ್ನು ಬಕ್ರಿ ಮಾಡದೆ ಇರುವದಕ್ಕಾದರೂ ಮಹಾಪ್ರಾಣ ಇರಬೇಕು ಅನಿಸುತ್ತದೆ ನನಗೆ ;-).