Sunday, November 18, 2007

ಓಲ್ಡ್ ಮ್ಯಾನ್ ಆಂಡ್ ದಿ ಸೀ

ನಿನ್ನೆ ಅರ್ನೆಸ್ಟ್ ಹೆಮಿಂಗ್ವೆಯ ನೋಬೆಲ್ ವಿಜೇತ ಪುಸ್ತಕ ’ದಿ ಓಲ್ಡ್ ಮ್ಯಾನ್ ಆಂಡ್ ದಿ ಸೀ’ ಓದಿದೆ. ಸುಮಾರು ನೂರ ಹತ್ತು ಪುಟಗಳ ಪುಸ್ತಕ ಅದ್ಭುತವಾದ ರೇಖಾಚಿತ್ರಗಳೊಡನೆ ಕೂಡಿದ್ದು ಕೊನೆಯವರೆಗೂ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಹಿಂದೊಮ್ಮೆ ಕಸ್ತೂರಿಯಲ್ಲಿ ಇದರ ಕನ್ನಡ ಅನುವಾದ ಪ್ರಕಟವಾಗಿತ್ತು. ಅದನ್ನು ಓದಿದ್ದು ಅರ್ಧರ್ಧ ನೆನಪಿದೆ ಎಂದುಕೊಂಡು ಎಷ್ಟೋ ಸಾರಿ ಮೂಲದ ಇಂಗ್ಲೀಷ್ ಪುಸ್ತಕ ಓದುವಬಗ್ಗೆ ಯೋಚಿಸಿರಲಿಲ್ಲ. ನಾನೆಷ್ಟು ತಪ್ಪು ತಿಳಿದುಕೊಂಡಿದ್ದೆ ಎನ್ನುವದು ಮೊದಲ ಕೆಲವು ಪುಟಗಳಲ್ಲೇ ತಿಳಿದು ಹೋಯಿತು.

ಸತತ ೮೪ ದಿನಗಳ ಕಾಲ ದಿನವೂ ಸಮುದ್ರಕ್ಕೆ ಹೋಗಿ ಒಂದೂ ಮೀನಿಲ್ಲದೆ ಬರುತ್ತಿದ್ದ ಸಾಂಟಿಯಾಗೋ ಎನ್ನುವ ಮುದುಕನ ಕತೆ ಇದು. ೮೫ನೇ ದಿನ ಅವನ ಅದೃಷ್ಟ ಪರೀಕ್ಷಿಸುತ್ತದೆ. ಎಂದೂ ಹಿಡಿರದಂತಹ ಮೀನೊಂದು ಅವನ ಗಾಳವನ್ನು ಕಚ್ಚುತ್ತದೆ. ಸಾಮಾನ್ಯ ಮೀನಲ್ಲ ಅದು. ಸರಳವಾಗಿ ಕೈಗೆ ಸಿಗುವದೂ ಅಲ್ಲ. ಮೂರು ದಿನಗಳ ಕಾಲ ಮುದುಕನ ಶಕ್ತಿ, ಯುಕ್ತಿ, ತಾಳ್ಮೆಗಳನ್ನು ಒರೆಗೆ ಹಚ್ಚುತ್ತದೆ. ಕೊನೆಗೆ ಮುದುಕನ ಕೈಯೇ ಮೇಲಾಗುತ್ತದೆ. ಇಷ್ಟಾದರೂ ಮುದುಕನಿಗೆ ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎಂದಂತೆ ಹಿಡಿದ ೧೫೦೦ ಪೌಂಡಿನ ಮೀನು ಶಾರ್ಕುಗಾಳ ಬಾಯಿಗೆ ಆಹಾರವಾಗಿ ಬರೀ ಮೀನಿನ ತಲೆ ಮತ್ತು ಅಸ್ಥಿಪಂಜರ ಉಳಿಯುತ್ತದೆ. ಮುದುಕ ಸರಳವಾಗಿ ಸೋಲೊಪ್ಪುವಂಥವನಲ್ಲ. ಮೂರು ನಾಲ್ಕು ಶಾರ್ಕುಗಳನ್ನೂ ಕೊಲ್ಲುತ್ತಾನೆ ಆದರೆ ಪ್ರತಿಯೊಂದು ಶಾರ್ಕ್ ಅಷ್ಟಿಷ್ಟು ತಿಂದು ಹಾಕುತ್ತದೆ.

ಸರಳವಾದ ಕಥೆ ಓದುತ್ತ ಹೋದಂತೆ ಹಿಡಿದಿಟ್ಟುಕೊಳ್ಳುತ್ತದೆ. ಕಥಾನಾಯಕ ಸಾಂಟಿಯಾಗೋನ ಕೌಶಲ್ಯವನ್ನು ಉತ್ಪ್ರೇಕ್ಷಿಸಲು ಹಲವು ಸಂದರ್ಭಗಳಿದ್ದರೂ ಎಲ್ಲೆಡೆ ಕಾಣುವದು ತಣ್ಣನೆಯ matter of fact ನಿರೂಪಣೆ. ಹಾಗೆ ಹೇಳದೇ ಹೋಗಿದ್ದರೆ ಮುದುಕನ ಸಾಮರ್ಥ್ಯಕ್ಕೆ ಅವಮಾನವಾಗುತ್ತಿತ್ತು ಎನಿಸುತ್ತದೆ. ಸತತ ಮೂರು ದಿನಗಳ ಕಾಲ ಗಾಳದ ಒಂದು ತುದಿ ಮೀನಿನ ಬಾಯಲ್ಲಿ ಮತ್ತು ಇನ್ನೊಂದು ತುದಿ ಮುದುಕನ ಕೈಯಲ್ಲಿ. ಎಲ್ಲೂ ನಿಲ್ಲದೆ ಎಳೆದುಕೊಂಡು ಹೋಗುವ ಮೀನಿಗೆ ಮುದುಕ ಹೇಳುವ ಮಾತುಗಳಲ್ಲಿ ಮುದುಕನ ತಲೆ ಮೀನಿನ ಜಾಡು ಹಿಡಿಯುವದರಲ್ಲೇ ನೆರೆತದ್ದರ ಅರಿವಾಗುತ್ತದೆ.

ನನಗೆ ಬಹಳ ಇಷ್ಟವಾದದ್ದು ಮುದುಕ ಮೀನಿನ ಜೊತೆಗೆ (ತನಗೆ ತಾನೇ ಕೂಡ) ಆಡುವ ಮಾತುಗಳು.

ಯಾವುದೇ ತರಹದ ಬಳಲುವಿಕೆಯೇ ಇಲ್ಲದಂತೆ ತನ್ನನ್ನೂ, ತನ್ನ ಪುಟ್ಟ ಹಡಗನ್ನೂ ಆ ಮೀನು ಸತತವಾಗಿ ಎಳೆದುಕೊಂಡು ಹೋಗುತ್ತಿರುವಾಗ ತನಗೇ ತಾನೆ ಹುರಿದುಂಬಿಸಿಕೊಳ್ಳುತ್ತಾನೆ. "ಆ ಹುಡುಗನಿಗೆ ನಾನೊಬ್ಬ ವಿಚಿತ್ರ ಮುದುಕ ಅಂತ ಹೇಳಿದೆ. ಈಗ ಅದನ್ನು ಸಾಧಿಸಿ ತೋರಿಸುವ ಕಾಲ ಬಂದಿದೆ. ಹಿಂದೆ ಎಷ್ಟು ಬಾರಿ ತೋರಿಸಿದ್ದೇನೆ ಎನ್ನುವದರಿಂದೇನೂ ಉಪಯೋಗವಿಲ್ಲ. ಪ್ರತಿಬಾರಿಯೂ ಹೊಸದಾಗಿ ಸಾಧಿಸಬೇಕು."

ಮೊದಲ ಶಾರ್ಕನ್ನು ಕೊಂದಾದ ಮೇಲೆ ಮುದುಕನಿಗೆ ಶಾರ್ಕ್ ತಿಂದು ಹರಿದಿರುವ ಮೀನಿನ ದೇಹ ನೋಡಿದಾಗ ಏನೋ ಪಾಪಪ್ರಜ್ಞೆ. ಅಷ್ಟರಲ್ಲೇ ಇನ್ನೂ ಪೂರ್ತಿ ಇದ್ದ ಮುಂಭಾಗ ನೋಡಿದಾಗ ಮತ್ತೆ ಹುರುಪು ಬರುತ್ತದೆ. ತನಗೆ ತಾನೇ ಹೇಳಿಕೊಳ್ಳುತ್ತಾನೆ, " ನಂಬಿಕೆಯನ್ನು ಪೂರ್ತಿ ಕಳೆದುಕೊಳ್ಳುವದು ಮೂರ್ಖತನ! ಅಲ್ಲದೆ ಅದು ಪಾಪವೂ ಹೌದು ಎಂದುಕೊಳ್ಳುತ್ತೇನೆ." ಪಾಪ-ಪುಣ್ಯಗಳ ಸೆಳವಿಗೆ ಅರಿವಿಲ್ಲದಂತೆಯೆ ಕಾಲಿಟ್ಟು ಮರುಕ್ಷಣ ಅಂದುಕೊಳ್ಳುತ್ತಾನೆ, "ಪಾಪಗಳ ಬಗ್ಗೆ ಯೋಚಿಸದಿರು ಈಗ. ಈಗಾಗಲೆ ಸಾಕಷ್ಟು ತೊಂದರೆಗಳಿಗೆ ಸಿಲುಕಿದ್ದೇನೆ. ಅದೂ ಅಲ್ಲದೆ ನಾನು ಪಾಪ ಪುಣ್ಯಗಳಲ್ಲಿ ನಂಬಿಕೆ ಇಟ್ಟಿದ್ದೇನೋ ಇಲ್ಲವೋ ಎನ್ನುವದು ನನಗೇ ಗೊತ್ತಿಲ್ಲ! ನಾನು ಈ ಮೀನನ್ನು ಕೊಂದಿದ್ದು ಇದರಿಂದ ಬಹಳಷ್ಟು ಜನರ ಹೊಟ್ಟೆ ತುಂಬುತ್ತದೆ ಎಂದು. ಒಂದು ಬಾರಿ ಕೊಂದಾದ ಮೇಲೆ ಪಾಪ-ಪುಣ್ಯಗಳನ್ನು ಮೀರಿ ಬಹಳ ಹಾದಿ ಬಂದಾಗಿದೆ!" ಯಾಕೆ ಇದೆಲ್ಲ ಯೋಚನೆ ಮಾಡಬೇಕು ಸುಮ್ಮನೆ ಕುಳಿತರಾಗದೇ ಎಂದುಕೊಳ್ಳುತ್ತಾನೆ. ಆದರೆ ಮತ್ತು ಸ್ವಲ್ಪ ಹೊತ್ತಿನಲ್ಲೇ ಹೇಳಿಕೊಳ್ಳುತ್ತಾನೆ; "ನೀನೇನೂ ಕೇವಲ ಊಟಕ್ಕಾಗಿ ಈ ಮೀನನ್ನು ಕೊಂದಿಲ್ಲ. ನಿನ್ನ ಆತ್ಮಗೌರವಕ್ಕಾಗೂ ಕೊಂದಿದ್ದೀಯ. ನೀನೊಬ್ಬ ಮೀನುಗಾರ ನೆನಪಿರಲಿ. ಅದು ಬದುಕಿದ್ದಾಗಲೂ ನೀನದನ್ನು ಪ್ರೀತಿಸಿದ್ದೆ. ಈಗ ಅದು ಸತ್ತಾಗಲೂ ನೀನದನ್ನು ಪ್ರೀತಿಸುತ್ತಿದ್ದೀಯ. ನೀನದನ್ನು ಪ್ರೀತಿಸಿದ್ದರೆ ಅದನ್ನು ಕೊಂದದ್ದೇನೂ ಪಾಪವಲ್ಲ. ಅಥವಾ ದೊಡ್ಡ ಪಾಪವೇ?" ಹೀಗೆ ಸರಿ-ತಪ್ಪುಗಳ, ಪುಣ್ಯ-ಪಾಪಗಳ ನಡುವಿನ ಮಸುಕು ಗೆರೆಗಳ ಅತ್ತಿತ್ತ ಓಲಾಡುವ ವಿಚಾರ ಸರಣಿ ಜೀವನದ ವೈರುಧ್ಯಗಳ ಪ್ರತೀಕದಂತಿದೆ!

ಮೀನನ್ನು ತಿನ್ನದ, ಮೀನು ಹಿಡಿಯುವವರ ಪಾಡಿನ ಅರಿವು ಅಷ್ಟಿರದ ನನಗೆ ಈ ಪುಸ್ತಕ ಹೊಸದೊಂದು ಲೋಕವನ್ನು ತೆರೆದಿಟ್ಟಿದೆ!